ನವದೆಹಲಿ: ಮೀಸಲಾತಿ ಮುಂದುವರಿಕೆ ಕುರಿತಂತೆ ಸಮಾಜದಲ್ಲಿ ಮಿಶ್ರ ಅಭಿಪ್ರಾಯ ಇರುವ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮೀಸಲಾತಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್, ಸಮಾಜದಲ್ಲಿ ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ಹೇಳಿದ್ದಾರೆ.
ಅಸಮಾನತೆ ನಮಗೆ ಕಾಣಿಸದಿದ್ದರೂ ಅದು ಸಮಾಜದಲ್ಲಿ ಇದೆ. ನಾವು ನಮ್ಮದೇ ಜನರನ್ನು ಈ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೆ ಇರಿಸಿದ್ದೇವೆ. ನಾವು ಅವರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಇದು 2000 ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ಅವರಿಗೆ ಸಮಾನತೆ ಸಿಗುವವರೆಗೂ ನಾವು ಅವರಿಗೆ ಕೆಲವು ವಿಶೇಷ ಸವಲತ್ತುಗಳನ್ನು ನೀಡಬೇಕಾಗುತ್ತದೆ. ಅಂಥ ಸವಲತ್ತುಗಳಲ್ಲೊಂದು ಮೀಸಲಾತಿ. ಹೀಗಾಗಿ ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು, ಸಂವಿಧಾನಬದ್ಧ ಮೀಸಲಾತಿಗೆ ಆರ್ಎಸ್ಎಸ್ನ ಸಂಪೂರ್ಣ ಬೆಂಬಲ ಇದೆ ಎಂದು ಅವರು ಹೇಳಿದ್ದಾರೆ.