ನವದೆಹಲಿ: 'ಭಾರತದಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಸಮ್ಮತವಾದ ನೀತಿಯು ಅಸ್ತಿತ್ವದಲ್ಲಿ ಇಲ್ಲ. ಆದರೆ, ಪ್ರಕರಣದ ತೀವ್ರತೆ ಹಾಗೂ ಸನ್ನಿವೇಶವನ್ನು ಶಿಕ್ಷೆ ವಿಧಿಸಲು ಪರಿಗಣಿಸಬಹುದಾಗಿದೆ. ಇದೇ ತತ್ವವನ್ನು ಪಾಲಿಸಲಾಗುತ್ತಿದೆ' ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
1984ರಲ್ಲಿ ನಡೆದ ಕೊಲೆ ಪ್ರಕರಣದ ಅಪರಾಧಿಗೆ ವಿಚಾರಣಾ ನ್ಯಾಯಾಲಯವು ಐದು ವರ್ಷ ಶಿಕ್ಷೆ ವಿಧಿಸಿತ್ತು. 2019ರ ಏಪ್ರಿಲ್‌ನಲ್ಲಿ ಅಲಹಾಬಾದ್ ಹೈಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಹಾಗೂ ಸಂಜಯ್ ಕರೋಲ್ ಅವರಿದ್ದ ನ್ಯಾಯಪೀಠವು ಸೋಮವಾರ ನಡೆಸಿತು.
ಅಪರಾಧಿಗೆ ವಿಧಿಸಿದ್ದ ಶಿಕ್ಷೆಯನ್ನು ಮೂರು ವರ್ಷಗಳಿಗೆ ಕಡಿತಗೊಳಿಸಿದ ನ್ಯಾಯಪೀಠವು, 'ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ಇಲ್ಲ. ಆದರೆ, ಶಿಕ್ಷೆಯ ಹಿಂದಿರುವ ಉದ್ದೇಶ ಹಾಗೂ ಇಂತಹ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಅನುಸರಿಸುವ ಅಂಶಗಳನ್ನು ನ್ಯಾಯಾಲಯವು ಪರಿಗಣಿಸಲಿದೆ' ಎಂದು ನ್ಯಾಯಪೀಠ ಹೇಳಿತು.