ಕಾಸರಗೋಡು: ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳಲ್ಲಿ ನೀಡುವ ವಿದ್ಯಾರ್ಥಿಗಳ ರಿಯಾಯತಿ ಕಾರ್ಡ್‍ಗಳ ವಿತರಣೆಯಲ್ಲಿ ವ್ಯಾಪಕ ಲೋಪ ಹಾಗೂ ಅವ್ಯವಸ್ಥೆ ನಡೆದುಬರುತ್ತಿರುವುದಾಗಿ ಖಾಸಗಿ ಬಸ್ ಮಾಲಿಕರ ಸಂಘದ ಪ್ರತಿನಿಧಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ಪಾಸ್ ವಿತರಣೆ ಜವಾಬ್ದಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ(ಆರ್‍ಟಿಓ)ಹೊಂದಿದ್ದು, ಕೆಲವು ದಿವಸಗಳಿಂದ ವಿವಿಧ ಕಾಲೇಜುಗಳು ಬುಕ್ ಸ್ಟಾಲ್‍ನಿಂದ ಕಾರ್ಡ್‍ಗಳನ್ನು ಖರೀದಿಸಿ ತಮ್ಮದೇ ಸಂಸ್ಥೆಯ ಮುದ್ರೆಯೊಂದಿಗೆ ಕಾರ್ಡ್‍ಗಳನ್ನು ವಿತರಿಸುತ್ತಿವೆ. ಅಲ್ಲದೆ, ವಿದ್ಯಾರ್ಥಿಗಳ ವಯಸ್ಸಿನ ಮಿತಿ, ಪ್ರಯಾಣದ ದೂರ ಪರಿಧಿಯನ್ನೂ ಲೆಕ್ಕಿಸದೆ ಕಾರ್ಡ್‍ಗಳನ್ನು ವಿತರಿಸಲಾಗುತ್ತಿದೆ. ಈ ಬಗ್ಗೆ ಖಾಸಗಿ ಬಸ್ ಮಾಲಿಕರ ಸಂಘಟನೆ ನಡೆಸಿರುವ ತಪಾಸಣೆಯಲ್ಲಿ ಹಲವು ಅನಧಿಕೃತ ಪಾಸ್‍ಗಳನ್ನು ಪತ್ತೆಹಚ್ಚಲಾಗಿದೆ.
ಸೂರಂಬೈಲಿನಿಂದ ಕುಂಬಳೆ ಮಾರ್ಗವಾಗಿ ಉದುಮದ ಫುಡ್ ಕ್ರಾಫ್ಟ್ ಸಂಸ್ಥೆಗೆ ತೆರಳುವ 53 ವರ್ಷದ ವಿದ್ಯಾರ್ಥಿಗೆ ಸಂಸ್ಥೆಯ ಮುಖ್ಯಸ್ಥರು ರಿಯಾಯಿತಿ ಕಾರ್ಡ್ ವಿತರಿಸಿರುವುದನ್ನು ಪತ್ತೆಹಚ್ಚಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷರು, ಬಸ್ ಮಾಲಿಕರ ಸಂಘದ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಪರಿಶೀಲಿಸಿದ ನಂತರ ಆರ್. ಟಿ. ಓ. ಕಾರ್ಡ್‍ಗಳ ವಿತರಣೆ ಮಾಡಬೇಕಾಗಿದ್ದರೂ, ಈ ನಿಬಂಧನೆಗಳನ್ನು ಉಲ್ಲಂಘಿಸಿ ಶಿಕ್ಷಣ ಸಂಸ್ಥೆಗಳು ತಮ್ಮ ಮನಸೋ ಇಚ್ಛೆ ಪ್ರಕಾರ ಕಾರ್ಡು ವಿತರಿಸಿರುವುದು ಖಂಡನೀಯ. ಅರ್ಹ ಶಿಕ್ಷಣ ಸಂಸ್ಥೆಗಳಿಗೆ ಆರ್.ಟಿ.ಓ ಮೂಲಕ ವಿತರಿಸಿದ ಕಾರ್ಡ್‍ಗಳನ್ನು ಮಾತ್ರ ಬಸ್ ರಿಯಾಯಿತಿಗೆ ಪರಿಗಣಿಸಲು ನಿರ್ಧರಿಸಲಾಗಿದೆ ಎಂಊ ಬಸ್ ಮಾಲಿಕರ ಸಂಘದ ಪ್ರತಿನಿಧಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.