ನವದೆಹಲಿ: ಗಲಭೆಪೀಡಿತ ಮಣಿಪುರದ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ತಡೆಯುಂಟು ಮಾಡಿರುವುದನ್ನು ತೆರವುಗೊಳಿಸಿ ಆಹಾರ, ಔಷಧಿ ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಹೆದ್ದಾರಿ ತಡೆಯನ್ನು ತಕ್ಷಣ ತೆರವುಗೊಳಿಸಲು ಸಾಧ್ಯವಾಗದಿದ್ದರೆ ವಾಯು ಮಾರ್ಗದ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರಿದ್ದ ನ್ಯಾಯಪೀಠವು ಸಲಹೆ ನೀಡಿದೆ.
'ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ತಡೆಯುಂಟು ಮಾಡಿರುವ ಕಾರಣ ಮಣಿಪುರದ ಜನರು ಉಪವಾಸದಿಂದಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಯು ಮಾರ್ಗದ ಮೂಲಕ ಆಹಾರ ಪದಾರ್ಥಗಳನ್ನು ಪೂರೈಸಬೇಕು' ಎಂದು ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಹೆದ್ದಾರಿ ತಡೆಯಿಂದಾಗಿ ಮೋರೆ ಪ್ರದೇಶದಲ್ಲಿ ಆಹಾರ ಪದಾರ್ಥಗಳು ಲಭ್ಯವಾಗದೆ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದ್ದಾರೆ.
ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ಸಮಿತಿಯು ಹೆದ್ದಾರಿ ತಡೆಯನ್ನು ತೆರವುಗೊಳಿಸಲು ನಿರ್ದೇಶನ ನೀಡಿಲ್ಲ ಎಂದು ಇಂದಿರಾ ಅವರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
'ಕೆಲವು ಪರಿಹಾರ ಶಿಬಿರಗಳಲ್ಲಿ ಚಿಕನ್ ಪಾಕ್ಸ್ ಮತ್ತು ದಡಾರ ಕಾಣಿಸಿಕೊಂಡಿದೆ ಮತ್ತು ಹೆದ್ದಾರಿ ತಡೆಯು ಆಹಾರ ಪೂರೈಕೆ ಮೇಲೆ ಪರಿಣಾಮ ಬೀರಿದೆ' ಎಂದು ಸಮಿತಿಯ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಹೇಳಿದ್ದಾರೆ.
ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವ ಬದಲು ನ್ಯಾಯಾಲಯದಲ್ಲಿ ಏಕೆ ವಾದಿಸುತ್ತಿದ್ದೀರಿ ಎಂದು ನ್ಯಾಯಪೀಠವು ಮೀನಾಕ್ಷಿ ಅವರನ್ನು ಪ್ರಶ್ನಿಸಿದೆ.
ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ತಡೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಮತ್ತು ಮಣಿಪುರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.
ಮಣಿಪುರದಲ್ಲಿ ಕೈಗೊಂಡಿರುವ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳ ಕುರಿತು ಸುಪ್ರೀಂ ಕೋರ್ಟ್ ಮುಂದಿನ ವಾರ ವಿಚಾರಣೆ ನಡೆಸಲಿದೆ.