ಕಾಸರಗೋಡು: ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಸೆ. 27ರಂದು ಆಚರಿಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯ ಹಿನ್ನೀರಿನ ಪ್ರವಾಸೋದ್ಯಮವನ್ನು ಪರಿಸರ ಸ್ನೇಹಿ ಪ್ರವಾಸೋದ್ಯಮವಾಗಿ ಪರಿವರ್ತಿಸಲಾಗಿದ್ದು, ನೀಲೇಶ್ವರದ ಕೋಟ್ಟಪ್ಪಾರ ಹೌಸ್‍ಬೋಟ್ ಟರ್ಮಿನಲ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹಿನ್ನೀರಿನ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಉತ್ತರ ಕೇರಳದ ನೀಲೇಶ್ವರ ಕೊಟ್ಟಪುರಂ ಹೌಸ್‍ಬೋಟ್‍ನೊಂದಿಗೆ ಬೋಟ್ ಟರ್ಮಿನಲ್‍ನ ಸೇರ್ಪಡೆ ಹಿನ್ನೀರಿನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳನ್ನು ತೆರೆದಿಟ್ಟಿದೆ. ಹಿನ್ನೀರಿನ ಸೌಂದರ್ಯದ ಪ್ರವಾಸವು ಕೋಟ್ಟಪುರಂ ಬೋಟ್ ಟರ್ಮಿನಲ್‍ನಿಂದ ಪ್ರಾರಂಭಗೊಂಡು ಕವ್ವಾಯಿ ವರೆಗೆ ವಿಸ್ತರಿಸಿಕೊಂಡಿದೆ.
ಕಾಂಡ್ಲಾ ತೋಪಿನ ಅಂಚಿನಿಂದ ಸಾಗುವ ಹೌಸ್‍ಬೋಟ್ ಪ್ರವಾಸ ಪ್ರತಿಯೊಬ್ಬ ಪ್ರಯಾಣಿಕಗೆ ಹೊಸ ಅನುಭವ ತಂದುಕೊಡುತ್ತಿದೆ. ಸಮುದ್ರಕ್ಕೆ ಹೊಂದಿಕೊಂಡಿರುವ ವಲಿಯಪರಂಬ ದ್ವೀಪ, ಎಡಇಲಕ್ಕಾಡ್ ಮತ್ತು ಐತಿ ಪ್ರದೇಶದ ಪ್ರಕೃತಿ ರಮಣೀಯ ದೃಶ್ಯಗಳ ವೀಕ್ಷಣೆಯೊಂದಿಗೆ ಇಲ್ಲಿ ಬೊಟ್ ಪ್ರಯಾಣ ನಡೆಸಬಹುದಾಗಿದೆ. ವಲಸೆ ಹಕ್ಕಿಗಳು ಸೇರಿದಂತೆ ವಿವಿಧ ಪಕ್ಷಿಗಳ ಆವಾಸಕೇಂದ್ರವಾಗಿರುವ ಈ ಪ್ರದೇಶ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಬೋಟ್ ಹೌಸ್‍ನಲ್ಲಿ ನೀರಿನ ಸವಾರಿ ಜತೆಗೆ ಸರೋವರದ ಮೀನುಗಳ ರುಚಿಕರವಾದ ಆಹಾರವೂ ದೋಣಿಮನೆಯಲ್ಲೇ ಲಭ್ಯವಿದೆ. ನಿಧಾನವಾಗಿ ಚಲಿಸುವ ಹೌಸ್‍ಬೋಟ್ ಉತ್ತಮ ವಿಶ್ರಾಂತಿ ಅನುಭವವಾಗಿದೆ. ಶಾಂತವಾದ ಹಿನ್ನೀರು ಇಲ್ಲಿನ ವಿಶೇಷತೆಯಾಗಿದೆ. ಕೇರಳದ ದಕ್ಷಿಣ ಪ್ರದೇಶಕ್ಕೆ ಹೋಲಿಸಿದರೆ, ಜಿಲ್ಲೆಯ ಹಿನ್ನೀರು ಕಡಿಮೆ ತ್ಯಾಜ್ಯವನ್ನು ಹೊಂದಿರುವ ಪ್ರದೇಶವಾಗಿದೆ. ಹಿನ್ನೀರಿನ ಪ್ರವಾಸೋದ್ಯಮವು ಉತ್ತರ ಮಲಬಾರ್‍ನ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಸೇರ್ಪಡೆಯಾಗಿದ್ದು, ಇಂದು ಜಿಲ್ಲೆಯ ಹೆಮ್ಮೆಯ ಪ್ರವಾಸೋದ್ಯಮ ತಾಣವಾಗಿ ಬೆಳೆದು ನಿಂತಿದೆ.