ಮಂಜೇಶ್ವರ: ಬದುಕಿನಲ್ಲಿ ಸಾಧಿಸಲು ಕನಸುಕಾಣಬೇಕು. ಬಳಿಕ ಅದಕ್ಕಾಗಿ ಶ್ರಮವಹಿಸಿ ದುಡಿಯಬೇಕು.ಆಗ ಯಶಸ್ಸು ಲಭಿಸುವುದು ಎಂದು ಬ್ರಿಗ್ರೇಡಿಯರ್ ಐ.ಎನ್.ರೈ ವಿದ್ಯಾರ್ಥಿಗಳಿಗೆ ಪ್ರೇರಣಾ ನುಡಿಯಾಡಿದರು.
ಅವರು ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲಾ ಸಂಚಾಲಕರಾಗಿದ್ದ ದಿ.ರಾಮಕೃಷ್ಣ ರಾಯರ 18ನೇ ಪುಣ್ಯ ತಿಥಿಯ ಸಂಸ್ಮರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಹಳೆವಿದ್ಯಾರ್ಥಿ ಮುಂಬಯಿಯ ಉದ್ಯಮಿ,ಕೊಡುಗೈ ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟರು ನೂತನವಾಗಿ ನಿರ್ಮಿಸಿದ 'ಭಾಗೀರಥಿ' ಕಿರುಸಭಾ ಭವನವನ್ನು ಉದ್ಘಾಟಿಸಿದರು. ಬಳಿಕ ಪ್ರಸ್ತುತ ವರ್ಷದ ಹಳೆವಿದ್ಯಾರ್ಥಿ ಸನ್ಮಾನಕ್ಕೆ ಅವರು ಭಾಜನರಾದರು. ಹುಟ್ಟೂರ ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅವರು ಸಮಾಜದಲ್ಲಿ ಸಂಕಷ್ಟಕ್ಕೊಳಗಾದವರ ಸಹಾಯಕ್ಕೆ ಯಥಾ ಸಾಧ್ಯ ಎಲ್ಲರೂ ಮುಂದಾಗಬೇಕೆಂದು ಕರೆಯಿತ್ತರು.
ಖ್ಯಾತವೈದ್ಯ ಡಾ.ಬಿ.ಯಸ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿವಿಧ ನಿರ್ಮಾಣ ಕಾರ್ಯಗಳ ಎಂಜಿನಿಯರ್ ರಂಗನಾಥ್ ಐತಾಳ್ ಅವರನ್ನು ಈಸಂದರ್ಭದಲ್ಲಿ ಗೌರವಿಸಲಾಯಿತು. ಶಾಲಾ ಸಂಚಾಲಕ ರಾಜೇಶ್ವರಿ ಯಸ್ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀಧರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ವಂದಿಸಿದರು. ರಾಧಾಮಣಿ ಬಿ ಹಾಗೂ ವಿನಯ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಹಾಗೂ ಮಾಸ್ಟರ್ಸ್ ಮೀಯಪದವು ತಂಡದಿಂದ ಯೋಗೀಶ ರಾವ್ ಚಿಗುರುಪಾದೆ ರಚಿಸಿ, ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶಿಸಿ ಅಭಿನಯಿಸಿದ ರಾಣಿ ಅಬ್ಬಕ್ಕ ನೃತ್ಯರೂಪಕ ಪ್ರದರ್ಶನ ಗೊಂಡಿತು.