ಒಟ್ಟಾವ; ಅರ್ಲಿ ಪ್ರೋಗ್ರೆಸ್ ಟ್ರೇಡ್ ಅಗ್ರಿಮೆಂಟ್ ಅಥವಾ ಇಪಿಟಿಎ ಕುರಿತು ಭಾರತದ ಜತೆ ನಡೆಯುತ್ತಿರುವ ಮಾತುಕತೆಗಳನ್ನು ಸ್ಥಗಿತಗೊಳಿಸಿರುವುದಾಗಿ ಕೆನಡಾ ಸರಕಾರ ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ಒಟ್ಟಾವದಲ್ಲಿನ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮ 'ಮಾತುಕತೆ ಸ್ಥಗಿತಕ್ಕೆ ಕಾರಣವನ್ನು ಕೆನಡಾ ಸರಕಾರ ತಿಳಿಸಿಲ್ಲ. ಆದರೆ ತಾತ್ಕಾಲಿಕ ಸ್ಥಗಿತವಾಗಿರುವ ಸಾಧ್ಯತೆಯಿದೆ' ಎಂದಿದ್ದಾರೆ.
ಉಭಯ ದೇಶಗಳ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ಅಥವಾ ಸಿಇಪಿಎಗೆ ಪೂರ್ವಭಾವಿಯಾಗಿ ಇಪಿಟಿಎ ಕುರಿತ ಮಾತುಕತೆ ಕಳೆದ ವರ್ಷ ಪ್ರಾರಂಭವಾಗಿತ್ತು. ಇದುವರೆಗೆ ಎರಡೂ ದೇಶಗಳ ನಡುವೆ 10 ಸುತ್ತಿನ ಮಾತುಕತೆಗಳು ಪೂರ್ಣಗೊಂಡಿವೆ. ಮೇ ತಿಂಗಳಲ್ಲಿ ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಕೆನಡಾದ ವಾಣಿಜ್ಯ ಸಚಿವೆ ಮೇರಿ ಎನ್ಜಿ ನಡುವೆ ಒಟ್ಟಾವದಲ್ಲಿ ನಡೆದ ಸಭೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಮತ್ತು ಇಪಿಟಿಎ 'ಸರಕುಗಳು, ಹೂಡಿಕೆ, ಸೇವೆ, ನಿಯಮಾಧಾರಿತ ಅಂತರಾಷ್ಟ್ರೀಯ ವ್ಯವಸ್ಥೆಯ ಮೇಲೆ ಗಮನ, ವ್ಯಾಪಾರ ಮತ್ತು ವಿವಾದ ಇತ್ಯರ್ಥಕ್ಕೆ ಇರುವ ತಾಂತ್ರಿಕ ತಡೆಗಳಂತಹ' ಕ್ಷೇತ್ರಗಳನ್ನು ಒಳಗೊಳ್ಳಲಿದೆ ಎಂದು ಕೆನಡಾದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿತ್ತು. ಎರಡು ದೇಶಗಳ ನಡುವಿನ ಸರಕುಗಳ ದ್ವಿಪಕ್ಷೀಯ ವ್ಯಾಪಾರ 2022ರಲ್ಲಿ ಸುಮಾರು 11.9 ಶತಕೋಟಿ ಕೆನಡಿಯನ್ ಡಾಲರ್ ಮಟ್ಟಕ್ಕೆ ತಲುಪಿದ್ದು 2021ರಿಂದ 56% ಪ್ರಗತಿಯಾಗಿದೆ.
ಅಕ್ಟೋಬರ್‌ನಲ್ಲಿ ಕೆನಡಾದ ಉನ್ನತಮಟ್ಟದ ನಿಯೋಗವೊಂದು ಭಾರತಕ್ಕೆ ಆಗಮಿಸಲಿದ್ದು ಆಗ ಈ ಮಾತುಕತೆ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಭಾರತದ ಹೈಕಮಿಷನರ್ ಹೇಳಿದ್ದಾರೆ.