HEALTH TIPS

ಭಾರತದ ಚೀತಾ ಯೋಜನೆಗೆ ಒಂದು ವರ್ಷ: ಸೋಂಕಿಗೆ ತುತ್ತಾಗದ ಚೀತಾಗಳನ್ನು ತರಲು ಚಿಂತನೆ

             ವದೆಹಲಿ: ಸೋಂಕಿಗೆ ತುತ್ತಾಗದ, ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ಚೀತಾಗಳನ್ನೇ ಮುಂದಿನ ದಿನಗಳಲ್ಲಿ ಭಾರತಕ್ಕೆ ತರಲು ಯೋಜಿಸಲಾಗಿದೆ ಎಂದು ಚೀತಾ ಮರುಪರಿಚಯ ಯೋಜನೆಯ ಮುಖ್ಯಸ್ಥ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಎಸ್‌.ಪಿ ಯಾದವ್‌ ತಿಳಿಸಿದ್ದಾರೆ.

            ನಮೀಬಿಯಾದಿಂದ ತಂದಿದ್ದ ಚೀತಾಗಳನ್ನು ಕಳೆದ ವರ್ಷ ಸೆ. 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬಿಡುಗಡೆ ಮಾಡಿದ್ದರು. ಈ ಮೂಲಕ ಭಾರತಕ್ಕೆ ಚೀತಾವನ್ನು ಪರಿಚಯಿಸುವ ಯೋಜನೆಯನ್ನು ಉದ್ಘಾಟಿಸಿದ್ದರು. ಈ ಭಾನುವಾರ ಯೋಜನೆಗೆ ಒಂದು ವರ್ಷ ತುಂಬಲಿದೆ.

             ಈ ಹಿನ್ನೆಲೆಯಲ್ಲಿ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿರುವ ಎಸ್‌.ಪಿ ಯಾದವ್‌, 'ಯೋಜನೆಯ ಎರಡನೇ ವರ್ಷದಲ್ಲಿ ಚೀತಾಗಳ ಸಂತಾನೋತ್ಪತ್ತಿಗೆ ಆದ್ಯತೆ ನೀಡಲಾಗುವುದು' ಎಂದು ತಿಳಿಸಿದ್ದಾರೆ.

ರೇಡಿಯೊ ಕಾಲರ್‌ಗಳಿಂದ ಚೀತಾಗಳ ಸಾವು ಸಂಭವಿಸಿದೆ ಎಂಬ ವಾದ ನಿರಾಕರಿಸಿರುವ ಅವರು, ದಕ್ಷಿಣ ಆಫ್ರಿಕಾದಿಂದಲೇ ತರಲಾದ ಹೊಸ ರೇಡಿಯೊ ಕಾಲರ್‌ಗಳನ್ನು ಚೀತಾಗಳಿಗೆ ಅಳವಡಿಸಲಾಗುವುದು ಎಂದು ಹೇಳಿದ್ದಾರೆ.

‌           ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮುಖ್ಯಸ್ಥರೂ ಆಗಿರುವ ಯಾದವ್, 'ಚೀತಾಗಳ ಮುಂದಿನ ತಂಡವನ್ನು ದಕ್ಷಿಣ ಆಫ್ರಿಕಾದಿಂದ ತರಿಸಿಕೊಳ್ಳಲಾಗುವುದು. ಅವುಗಳನ್ನು ಮಧ್ಯಪ್ರದೇಶದ ಗಾಂಧಿ ಸಾಗರ್ ಅಭಯಾರಣ್ಯಕ್ಕೆ ಬಿಡಲಾಗುವುದು' ಎಂದು ತಿಳಿಸಿದರು.

              'ಕುನೊ ರಾಷ್ಟ್ರೀಯ ಉದ್ಯಾನ 20 ಚೀತಾಗಳಿಗೆ ಆಶ್ರಯ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕ್ರಿಯಾ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ಈಗ, ಒಂದು ಮರಿ ಸೇರಿದಂತೆ 15 ಚೀತಾಗಳಿವೆ. ಮುಂದಿನ ಹಂತದಲ್ಲಿ ತರಲಾಗುವ ಚೀತಾಗಳನ್ನು ಇತರ ಅಭಯಾರಣ್ಯಗಳಲ್ಲಿ ಇರಿಸಲಾಗುವುದು. ಮಧ್ಯಪ್ರದೇಶದ ಗಾಂಧಿ ಸಾಗರ್ ಮತ್ತು ನೌರದೇಹಿ ಅಭಯಾರಣ್ಯ ಇದಕ್ಕೆ ಸೂಕ್ತವಾಗಿದೆ' ಎಂದರು.

                ಚೀತಾಗಳನ್ನು ರಾಜಸ್ಥಾನದ ಮುಕುಂದ್ರ ಬೆಟ್ಟಗಳಲ್ಲಿ ಬಿಡಲು ಕೆಲವು ತಜ್ಞರು ಶಿಫಾರಸು ಮಾಡಿದ್ದಾರೆ. ಆದರೆ, ಇದು ಚೀತಾಗಳಿಗೆ ಪ್ರಶಸ್ತವಲ್ಲ. ಮುಕುಂದ್ರ ಹುಲಿ ಸಂರಕ್ಷಿತ ಪ್ರದೇಶ. ಆದರೆ, ಅಲ್ಲಿ ಹುಲಿಗಳ ಪರಿಚಯವೂ ಯಶಸ್ವಿಯಾಗಿಲ್ಲ! ಅಲ್ಲಿ ಪರಾವಲಂಬಿಗಳು ಹೆಚ್ಚು. ಉಣ್ಣಿಗಳ ಸೋಂಕಿನಿಂದ ಈಗಾಗಲೇ ಎರಡು ಹುಲಿಗಳು ಮತ್ತು ಮರಿಗಳು ಅಲ್ಲಿ ಮೃತಪಟ್ಟಿವೆ. ಮುಕುಂದ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಹೀಗಾಗಿ ಮುಕುಂದ್ರ ಚೀತಾಗಳಿಗೆ ಯೋಗ್ಯ ಎಂದು ನಾನು ಭಾವಿಸಲಾರೆ' ಎಂದು ಯಾದವ್‌ ಹೇಳಿದರು.

             'ಭಾರತದಲ್ಲಿ ಬೇಸಿಗೆ ಮತ್ತು ಮಾನ್ಸೂನ್ ಇದ್ದಾಗ ಆಫ್ರಿಕಾದ ಚೀತಾಗಳು ಚಳಿಗಾಲದ ನಿರೀಕ್ಷೆಯಲ್ಲಿ ದೇಹದ ಮೇಲೆ ದಪ್ಪನೆಯ ಪದರ (ವಿಂಟರ್‌ ಕೋಟ್‌)ವನ್ನು ಅನಿರೀಕ್ಷಿತವಾಗಿ ಬೆಳೆಸಿಕೊಂಡವು. ಇದು ಸೋಂಕು ಉಲ್ಬಣಗೊಳ್ಳಲು ಕಾರಣವಾಯಿತು. ಆಫ್ರಿಕನ್ ತಜ್ಞರೂ ಇದನ್ನು ನಿರೀಕ್ಷಿಸಿರಲಿಲ್ಲ' ಎಂದು ಅವರು ಹೇಳಿದ್ದಾರೆ.

           'ಚೀತಾಗಳ ದೇಹದ ಮೇಲೆ ಮೂಡಿದ ದಪ್ಪನೆಯ ಪದರ, ತೇವಾಂಶದಿಂದಾಗಿ ಅವುಗಳಿಗೆ ತುರಿಕೆ ಉಂಟಾಗಿತ್ತು. ತುರಿಕೆ ನಿವಾರಣೆಗಾಗಿ ಚೀತಾಗಳು ಕುತ್ತಿಗೆ ಭಾಗವನ್ನು ಮರಕ್ಕೆ ಮತ್ತು ನೆಲಕ್ಕೆ ಉಜ್ಜಿದ್ದವು. ಇದರಿಂದ ಚರ್ಮದಲ್ಲಿ ಗಾಯಗಳಾದವು. ಈ ಗಾಯಗಳನ್ನು ಮುತ್ತಿಕೊಂಡ ನೊಣಗಳು ಮೊಟ್ಟೆ ಇಟ್ಟಿದ್ದವು. ಪರಿಣಾಮವಾಗಿ ಚರ್ಮದ ತೀವ್ರ ಸೋಂಕು ಉಂಟಾಗಿತ್ತು. ಅದು ಬ್ಯಾಕ್ಟಿರಿಯಾ ಸೋಂಕಿಗೂ ಕಾರಣವಾಗಿ, ರಕ್ತದಲ್ಲಿ ನಂಜುಂಟಾಗಿ ಸಾವು ಸಂಭವಿಸಿತ್ತು' ಎಂದು ಯಾದವ್‌ ವಿವರಿಸಿದ್ದಾರೆ.

             ಆದರೆ, ಕೆಲವು ಚೀತಾಗಳಲ್ಲಿ ಸೋಂಕಿನ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ. ಅವು ಭಾರತದ ಪರಿಸರಕ್ಕೆ ಹೊಂದಿಕೊಂಡಿವೆ. ಹೀಗಾಗಿ ಮುಂದಿನ ತಂಡದಲ್ಲಿ ಇಂಥ ಚೀತಾಗಳನ್ನೇ ತರಲು ನಿರ್ಧರಿಸಿಲಾಗಿದೆ ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries