ತಿರುವನಂತಪುರಂ: ಎನ್ ಎಸ್ ಎಸ್ ನಾಮಜಪಯಾತ್ರೆ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಪೋಲೀಸರಿಗೆ ಕಾನೂನು ಸಲಹೆ ನೀಡಲಾಗಿದೆ. ಮೆರವಣಿಗೆಯಲ್ಲಿ ಯಾವುದೇ ಹಿಂಸಾಚಾರ ಅಥವಾ ಅಕ್ರಮ ನಡೆದಿಲ್ಲ ಎಮದು ಕಾನೂನು ಸಲಹೆ ಬೊಟ್ಟುಮಾಡಿದೆ.
ನಾಮಜಪಯಾತ್ರೆ ವಿರುದ್ಧ ಯಾವುದೇ ವ್ಯಕ್ತಿ ಅಥವಾ ಸಂಘಟನೆ ದೂರು ನೀಡದಿದ್ದರೆ ಪ್ರಕರಣ ಹಿಂಪಡೆಯಬಹುದು ಎಂಬುದು ಕಾನೂನು ಸಲಹೆ. ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್ ಮನು ಕಂಟೋನ್ಮೆಂಟ್ ಪೋಲೀಸರಿಗೆ ಈ ಬಗ್ಗೆ ಸಲಹೆ ನೀಡಿರುವರು.
ಸ್ಪೀಕರ್ ಎಎನ್ ಶಂಸೀರ್ ಅವರು ಗಣೇಶನನ್ನು ಅವಮಾನಿಸುವ ವಿವಾದಾತ್ಮಕ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಲು ಎನ್ಎಸ್ಎಸ್ ನಾಮಜಪಯಾತ್ರೆಯನ್ನು ಆಯೋಜಿಸಿತ್ತು. ಆಗಸ್ಟ್ 2 ರಂದು ತಿರುವನಂತಪುರಂ ಪಾಳಯಂಗೆ ಮೆರವಣಿಗೆ ನಡೆದಿತ್ತು. ನಂತರ ಕಂಟೋನ್ಮೆಂಟ್ ಪೋಲೀಸರು ಎನ್‍ಎಸ್‍ಎಸ್ ಉಪಾಧ್ಯಕ್ಷ ಸಂಗೀತ್ ಕುಮಾರ್ ಮತ್ತು ಸುಮಾರು ಒಂದು ಸಾವಿರ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಅನುಮತಿ ಪಡೆಯದೇ ಮೆರವಣಿಗೆ ಆಯೋಜಿಸಲಾಗಿದೆ ಎಂಬುದು ಸರ್ಕಾರದ ವಿವರಣೆ. ಹೈಕೋರ್ಟ್‍ನಲ್ಲಿ ಪ್ರಕರಣ ಬಾಕಿ ಇರುವುದರಿಂದ ಪ್ರಕರಣವನ್ನು ಮುಚ್ಚಿ ಹಾಕುವುದು ಸುಲಭವಲ್ಲ, ಹೀಗಾಗಿ ಪೋಲೀಸರು ಕಾನೂನು ಸಲಹೆ ಕೇಳಿದ್ದರು.