ಪೆರ್ಲ : ಜಿಲ್ಲೆಯ ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಕಾನದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಜೋಯಾಲುಕ್ಕಾಸ್ ಫೌಂಡೇಶನ್ ನಿರ್ಮಿಸಿರುವ ಮನೆಗಳನ್ನು ನವೀಕರಣಗೊಳಿಸಲಾಗುತ್ತಿವೆ. ಸರ್ಕಾರ ಮಂಜೂರುಗೊಳಿಸಿದ ಸುಮಾರು ಐದು ಎಕರೆ ಪ್ರದೇಶದಲ್ಲಿ 2019 ರಲ್ಲಿ ಕಾಮಗಾರಿ ಪೂರ್ಣಗೊಂಡ 36 ಮನೆಗಳನ್ನು ನಿರ್ಮಿಸಲಾಗಿದೆ. ಸಂತ್ರಸ್ತರಿಗೆ ಆಶ್ರಯ ನೀಡುವಲ್ಲಿ ಜೋಯಾಲುಕಾಸ್ ನೆರವಿನೊಂದಿಗೆ ಈ ಮನೆಗಳನ್ನು ಸಕಾಲದಲ್ಲಿ ನಿರ್ಮಿಸಿ ಒಟ್ಟು 36 ಮನೆಗಳ ಕೀಲಿಕೈಗಳನ್ನು ಸತ್ಯಸಾಯಿ ಟ್ರಸ್ಟ್‍ಗೆ ಹಸ್ತಾಂತರಿಸಲಾಗಿದೆ. ಆದರೆ ಮೂಲಸೌಕರ್ಯ ಒದಗಿಸಿ ಸಂತ್ರಸ್ತರಿಗೆ ಮನೆ ಕೀಲಿಕೈ ಹಸ್ತಾಂತರಿಸಲು ಜಿಲ್ಲಾಡಳಿತಕ್ಕೆ ಇನ್ನೂ ಸಾಧ್ಯವಾಗದಿರುವ ಬಗ್ಗೆ ಫಲಾನುಭವಿಗಳೂ ಅಸಮಧಾನಗೊಂಡಿದ್ದಾರೆ. ಈ ಮಧ್ಯೆ ಮನೆಗಳಿಗೆ ಕಾಡು ಆವರಿಸಿ ಮನೆಯ ಕಿಟಿಕಿ ಬಾಗಿಲುಗಳು ಶಿಥಿಲಾವಸ್ಥೆ ತಲುಪಿದ್ದು, ಇವುಗಳ ನಿರ್ವಹಣೆಗೆ ಇಪ್ಪತ್ತೈದು ಲಕ್ಷ ರೂಪಾಯಿ ವ್ಯಯಿಸಲಾಗಿದೆ.
ಜೋಯಾಲುಕಾಸ್ ಪ್ರತಿಷ್ಠಾನದ ಸಾಮಾಜಿಕ ಹೊಣೆಗಾರಿಕೆ ವಿಭಾಗದಿಂದ ಎರಡೂವರೆ ಕೋಟಿ ರೂ. ವೆಚ್ಚಲದಲ್ಲಿ ಸತ್ಯಸಾಯಿ ಟ್ರಸ್ಟ್‍ನ ಸಾಯಿಪ್ರಸಾದ ಯೋಜನೆಯನ್ವಯ ಜೋಯಾಲುಕಾಸ್ ಗ್ರಾಮವನ್ನು ನಿರ್ಮಿಸಲಾಗಿದೆ. ಜೋಯಾಲುಕಾಸ್ ಫೌಂಡೇಶನ್ ನೇತೃತ್ವದಲ್ಲಿ 456 ಚದರ ಗಜಗಳ ವಿಸ್ತೀರ್ಣದ ಮನೆ, ಸಂಬಂಧಿತ ಸೌಲಭ್ಯಗಳು ಮತ್ತು ಮನೆಗಳಿಗೆ ರಸ್ತೆಯನ್ನು ನಿರ್ಮಿಸಲಾಗಿದೆ. ಇದಲ್ಲದೇ ಜೋಯಾಲುಕಾಸ್ ಪ್ರತಿಷ್ಠಾನದ ನೇತೃತ್ವದಲ್ಲಿ ಹಲವು ಸ್ವಯಂ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಕಾಂಗ್ರೆಸ್ ಒತ್ತಾಯ:
ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಯೋಜನೆಯಲ್ಲಿ 36ಮನೆಗಳ ಕಾಂಗಾರಿ ಪೂರ್ತಿಗೊಂಡಿದ್ದು, ವಿದ್ಯುತ್, ರಸ್ತೆ, ನೀರಿನ ವ್ಯವಸ್ತೆ ಪೂರ್ತಿಗೊಂಡಿದ್ದು, ಮನೆಗಳನ್ನು ಶೀಘ್ರ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿ ಜಿಲ್ಲಾಧಿಕಾರಿಯನ್ನು ಮನವಿ ಮೂಲಕ ಆಗ್ರಹಿಸಿದೆ. ಈಗಾಗಲೇ ಕುಟುಂಬಶ್ರೀ, ಉದ್ಯೋಗ ಖಾತ್ರಿ ಯೋಜನೆ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆ ಸಿಬ್ಬಂದಿ ಮನೆ ವಠಾರದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿದೆ. ಎಣ್ಮಕಜೆ ಗ್ರಾಮಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದ ಸಂದರ್ಭ ಮಂಡಲ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದರು. ಮಂಡಲ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭಿರ್, ಪದಾಧಿಖಾರಿಗಳಾದ ಮಾಯಿಲ ನಾಯ್ಕ್, ವಿಲ್ಫ್ರೆಡ್ ಡಿ.ಸೋಜ, ನಾರಾಯಣ ನಾಯ್ಕ ಜತೆಗಿದ್ದರು.