ಕುಂಬಳೆ: ಇತ್ತೀಚಿನ ವರ್ಷಗಳಿಂದ ಸತತವಾಗಿ ಎಡವಟ್ಟುಗಳ ಮೂಲಕ ಕೆಂಗಣ್ಣಿಗೆ ಕಾರಣವಾಗಿರುವ ಕೇರಳ ಲೋಕಸೇವಾ ಆಯೋಗ ಇದೀಗ ಮತ್ತೆ ಕಾಸರಗೋಡಿನ ಕನ್ನಡ ಅಭ್ಯರ್ಥಿಗಳಿಗೆ ವಂಚನೆ ನಡೆಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಲೋಕಸೇವಾ ಆಯೋಗ ಜೂ.9 ರಂದು ನಡೆಸಿದ್ದ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ನೇಮಕಾತಿ ಪರೀಕ್ಷೆ(ಕೆಟಗರಿ ನಂಬ್ರ 707/2022) ಆರಂಭದಿಂದಲೇ ಟೀಕೆಗೊಳಗಾಗಿದ್ದು ಇದೀಗ ಉತ್ತರ ಪತ್ರಿಕೆ ಪ್ರಕಟಗೊಂಡಿದ್ದು ಪರೀಕ್ಷೆ ಬರೆದ ಬಹುತೇಕರಿಗೂ ಅರ್ಹತೆ ಲಭ್ಯವಾಗದೆ ವಂಚನೆ ನಡೆಸಲಾಗಿರುವುದು ಬೆಳಕಿಗೆ ಬಂದಿದೆ.
ಅಭ್ಯರ್ಥಿಗಳಿಗೆ ನೀಡಲಾದ 100 ಅಂಕಗಳ ಪ್ರಶ್ನೆಪತ್ರಿಕೆಯಲ್ಲಿ ಇದೀಗ ವಿಜ್ಞಾನ ವಿಭಾಗದ ಶೇ.56(ಪ್ರಶ್ನೆ ಸಂಖ್ಯೆ: 22,23, 25,26, 28,29, 32,35, 36,38, 39,40, 41,43) ಪ್ರಶ್ನೆಗಳನ್ನು ಅಸಾಧುವೆಂದು ಘೋಷಿಸಲಾಗಿದೆ. ಗಣಿತ ವಿಭಾಗದಲ್ಲಿ ಶೇ.40(ಪ್ರಶ್ನೆಸಂಖ್ಯೆಗಳಾದ 48,50,51, 53,55, 57)ಪ್ರಶ್ನೆಗಳನ್ನೂ, ಮನಃಶಾಸ್ತ್ರ ವಿಭಾಗದ ಶೇ.40(ಪ್ರಶ್ನೆ ಸಂಖ್ಯೆಗಳಾದ 67,70, 71,72, 73,75,76,78)ಪ್ರಶ್ನೆಗಳನ್ನು ಕೈಬಿಡಲಾಗಿದೆ ಎಂದು ಘೋಶಿಸಿದೆ.
ಪೂರ್ತಿ ಪ್ರಶ್ನೆಪತ್ರಿಕೆಯಲ್ಲಿ ವಿಜ್ಞಾನ ವಿಷಯದ ಬಗೆಗಿನ ಶೇ.56 ಪ್ರಶ್ನೆಗಳನ್ನು ರದ್ದುಗೊಳಿಸಿ ಶೇ.46 ಪ್ರಶ್ನೆಗಳನ್ನು ಗಣನೆಗೆ ತೆಗೆದುಕೊಂಡಿರುವುದಾಗಿ ಹೇಳಲಾಗಿದೆ. ಉಳಿದಂತೆ ಗಣಿತ ಹಾಗೂ ಮನಃಶಾಸ್ತ್ರದಿಂದ 40 ಶೇ.ಪ್ರಶ್ನೆಗಳು ರದ್ದುಗೊಂಡಿರುವುದು ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜೊತೆಗೆ ತಪ್ಪು ಉತ್ತರ ನೀಡಿದವರಿಗೆ ಅಂಕಗಳ ಕಡಿತದ ನಿಯಮವೂ ಜಾರಿಯಲ್ಲಿರುವುದರಿಂದ ವಿಜ್ಞಾನ ಅಧ್ಯಯನಗೈದ ಅಭ್ಯರ್ಥಿಗಳಿಗೆ ಭಾರೀ ವಂಚನೆ ನಡೆದಿರುವುದು ಕಂಡುಬರುತ್ತಿದೆ.
ಪ್ರಶ್ನೆಪತ್ರಿಕೆಯ ಬಹುಶೇಕಡಾ ಭಾಗ ರದ್ದುಗೊಳಿಸಿ ಕನಿಷ್ಠ ಪ್ರಶ್ನೆಗಳ ಮಾನದಂಡದಡಿ ಪರೀಕ್ಷೆಯ ಅಂಕ ನೀಡಿರುವುದು ಯಾವ ನ್ಯಾಯದ ಆಧಾರದಲ್ಲಿ ಎಂಬ ಸಂಶಯ ಇದೀಗ ಮೂಡಿಬಂದಿದೆ. ಒಟ್ಟು ಪರೀಕ್ಷೆಯನ್ನೇ ರದ್ದುಗೊಳಿಸಬೇಕಿದ್ದಲ್ಲಿ, ನೀಡಿರುವ ಪ್ರಶ್ನೆಪತ್ರಿಕೆಯ ಪ್ರಶ್ನೆಗಳಲ್ಲಿ ಗೊಂದಲಮಯ ಪ್ರಶ್ನೆಗಳನ್ನು ಯಾವ ಪರಿಶೀಲನೆಯೂ ಇಲ್ಲದೆ ಸೇರಿಸಿ, ಬಳಿಕ ಮೌಲ್ಯಮಾಪನಗೈದು ಫಲಿತಾಂಶ ಪ್ರಕಟಿಸುವಾಗ ತಮ್ಮದೇ ತಪ್ಪನ್ನು ಅಭ್ಯರ್ಥಿಗಳ ಮುಖಕ್ಕೆ ಒರೆಸಿ ಕೈತೊಳೆದುಕೊಂಡ ಲೋಕಸೇವಾ ಆಯೋಗದ ಧೋರಣೆ ಕಾಸರಗೋಡಿನ ಕನ್ನಡ ಅಭ್ಯರ್ಥಿಗಳಿಗೆ ಮಾಡಿದ ಮಹಾಮೋಸವಾಗಿದೆ.
ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಈಗಾಗಲೇ ದೊಡ್ಡ ಪ್ರಮಾಣದ ಶಿಕ್ಷಕರ ಕೊರತೆಯಿದ್ದು, ಹಲವು ವರ್ಷಗಳಿಂದ ನಡೆದಿರದ ಆಯೋಗದ ಪರೀಕ್ಷೆ ಇದೀಗ ನಡೆಸಿಯೂ ಅಪ್ರಯೋಜನಕಾರಿಯಾಗಿ, ನೂರಾರು ಶಿಕ್ಷಕ ಅಭ್ಯರ್ಥಿಗಳ ಭವಿಷ್ಯವನ್ನೇ ಹಾನಿಗೊಳಿಸಿ ಶಾಶ್ವತ ಅಪಾಯಕ್ಕೆ ಕಾರಣವಾಗಿರುವುದಕ್ಕೆ ಸರ್ಕಾರ ಹೇಗೆ ನ್ಯಾಯ ಒದಗಿಸುವುದೋ ಎಂಬುದು ಜ್ವಲಂತ ಸವಾಲಾಗಿ ಸೃಷ್ಟಿಗೊಂಡಿದೆ.