ಕಾಸರಗೋಡು:ಈದ್ ಮಿಲಾದುನ್ನಬಿ ಹಬ್ಬವನ್ನು ಜಿಲ್ಲಾದ್ಯಂತ ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು. ನಿರಂತರ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ನೂರಾರು ಮಂದಿ ಈದ್‍ಮಿಲಾದ್ ಹಬ್ಬದ ಸಡಗರದಲ್ಲಿ ಮಿಂದೆದ್ದರು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಮದ್ರಸಾ ವಿದ್ಯರ್ಥಿಗಳಿಗಾಗಿ ವಿಶೇಷ ಸ್ಪರ್ಧೆಗಳು, ದಫ್‍ಮುಟ್ ಒಳಗೊಂಡಂತೆ ಈದ್ ರ್ಯಾಲಿ ನಡೆಯಿತು.
ಮುಹಿಮ್ಮತ್‍ನಲ್ಲಿ ವಿಶೇಷ ಕಾರ್ಯಕ್ರಮ:
ಪ್ರವಾದಿ ಮುಹಮ್ಮದ್ (ಸ) ಜನ್ಮದಿನಾಚರಣೆ ಈದ್‍ಮಿಲಾದ್ ಅಂಗವಾಗಿ ಪುತ್ತಿಗೆ ಕಟ್ಟತ್ತಡ್ಕ ಮುಹಿಮ್ಮತ್‍ನಲ್ಲಿ ಮಿಲಾದ್ ರ್ಯಾಲಿ ನಡೆಯಿತು. ಬಿರುಸಿನ ಮಳೆಯ ನಡುವೆಯೂ ಮುಹಿಮ್ಮತ್ ಮಖಾಂ ಝಿಯಾರತ್‍ನೊಂದಿಗೆ ಆರಂಭವಾದ ರ್ಯಾಲಿಗೆ ವಿವಿಧೆಡೆ ಸ್ಥಳೀಯರು ಅದ್ಧೂರಿ ಸ್ವಾಗತ ನೀಡಿದರು. ಜಮಾಲುಲ್ ಲೈಲಿ, ಸೈಯದ್ ಹಮೀದ್ ಅನ್ವರ್ ಅಹ್ದಲ್ ಅಹ್ದಲ್ ತಂಗಳ್, ಸೈಯದ್ ಅಬ್ದುಲ್ ಕರೀಂ ತಂಙಲ್ ಚೂರಿ, ಉಮರ್ ಸಖಾಫಿ ಕರ್ನೂರು, ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್, ಮೂಸಾ ಸಖಾಫಿ ಕಳತ್ತೂರು, ಅಬ್ದುಲ್ ಫತ್ತಾಹ್ ಸಅದಿ, ಜಮಾಲ್ ಸಖಾಫಿ ಪೆರ್ವಾಡ್, ಹಸನ್ ಹಿಮಾಮಿ, ಇಬ್ರಾಹಿಂ ಸಖಾಫಿ ಸಖಾಫಿ, ಅಬ್ಬಾಸ್ ಸಖಾಫಿ. ಅಬ್ದುಲ್ ಅಝೀಝ್ ಹಿಮಮಿ ಗೋಸಾಡ, ಕಬೀರ್ ಸಅದಿ ಮೊದಲಾದವರು ರ್ಯಾಲಿಯ ನೇತೃತ್ವ ವಹಿಸಿದ್ದರು.
ಕಾಸರಗೋಡು ತಳಂಗರೆ ಮಾಲಿಕ್‍ದೀನಾರ್ ಮಸೀದಿ, ಮೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ, ತೆರುವತ್ ಜುಮಾ ಮಸೀದಿ ಸೇರಿದಂತೆ ಜಿಲ್ಲೆಯ ನಾನಾ ಕಡೆ ಈದ್ ಮಿಲಾದುನ್ನಬಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪುತ್ತಿಗೆ ಮುಹಿಮ್ಮತ್ ಜುಮಾ ಮಸೀದಿ ವತಿಯಿಂದ ನಡೆದ ಮಿಲಾದ್ ರ್ಯಾಲಿಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.