ನವದೆಹಲಿ : ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು -1994ಕ್ಕೆ ಕೇಂದ್ರ ಸರ್ಕಾರವು ತಿದ್ದುಪಡಿ ತಂದಿದ್ದು, ಕೇಬಲ್ ಜಾಲ ನಿರ್ವಹಣೆ ಮಾಡುವವರು (ಎಂಎಸ್‌ಒ) ತಮ್ಮ ಮೂಲಸೌಕರ್ಯವನ್ನು ಇಂಟರ್ನೆಟ್ ಸೇವೆ ಒದಗಿಸುವವರ ಜೊತೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದೆ. ತಿದ್ದುಪಡಿ ನಿಯಮಗಳನ್ನು ಕೇಂದ್ರವು ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ದೇಶದ ಮೂಲೆ ಮೂಲೆಗಳಿಗೂ ಇಂಟರ್ನೆಟ್ ಸಂಪರ್ಕ ಸಿಗುವಂತೆ ಆಗಬೇಕು ಎಂಬ ಉದ್ದೇಶದಿಂದ, ಕೇಬಲ್ ಜಾಲ ನಿರ್ವಹಣೆ ಮಾಡುವವರು ಇಂಟರ್ನೆಟ್ ಸೇವಾದಾತರ ಜೊತೆ ತಮ್ಮ ಮೂಲಸೌಕರ್ಯ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ತಿದ್ದುಪಡಿ ಪ್ರಕಾರ, ಚಂದಾದಾರರಿಗೆ ಕೇಬಲ್ ಟಿ.ವಿ. ಸಂಪರ್ಕವನ್ನು ಕಲ್ಪಿಸುವವರಿಗೆ 10 ವರ್ಷಗಳ ಅವಧಿಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಇರಲಿದೆ. ನೋಂದಣಿ ಪ್ರಕ್ರಿಯೆಯು ಬ್ರಾಡ್‌ಕಾಸ್ಟ್ ಸೇವಾ ಪೋರ್ಟಲ್ ಮೂಲಕ ನಡೆಯುತ್ತದೆ. ನೋಂದಣಿ ನವೀಕರಣಕ್ಕೆ ಪ್ರೊಸೆಸಿಂಗ್ ಶುಲ್ಕ ₹1 ಲಕ್ಷ ಇರಲಿದೆ.
'ನವೀಕರಣ ಪ್ರಕ್ರಿಯೆಯು ವಾಣಿಜ್ಯ ವಹಿವಾಟು ನಡೆಸುವುದನ್ನು ಸುಲಲಿತಗೊಳಿಸುವ ಸರ್ಕಾರದ ಬದ್ಧತೆಗೆ ಅನುಗುಣವಾಗಿ ಇದೆ. ನವೀಕರಣ ಪ್ರಕ್ರಿಯೆಯು ಕೇಬಲ್ ಆಪರೇಟರ್‌ಗಳಿಗೆ ತಮ್ಮ ಸೇವೆಗಳನ್ನು ಮುಂದುವರಿಸುವ ವಿಚಾರದಲ್ಲಿ ಖಚಿತತೆಯನ್ನು ತಂದುಕೊಡುತ್ತದೆ. ಹಾಗಾಗಿ, ಈ ವಲಯವು ವಿದೇಶಿ ಹೂಡಿಕೆಗೆ ಆಕರ್ಷಕವಾಗಲಿದೆ' ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಈ ಮೊದಲು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳು - 1994ರ ಅಡಿಯಲ್ಲಿ ಹೊಸ ಎಂಎಸ್‌ಒ ನೋಂದಣಿಗಳಿಗೆ ಮಾತ್ರ ಅವಕಾಶ ಇತ್ತು. ಹಳೆಯ ನಿಯಮಗಳು ಎಂಎಸ್‌ಒ ನೋಂದಣಿಯ ಅವಧಿ ಎಷ್ಟು ಎಂಬುದನ್ನು ಗುರುತಿಸುವ ಕೆಲಸ ಮಾಡಿರಲಿಲ್ಲ.
ಕೇಬಲ್ ಜಾಲ ನಿರ್ವಹಣೆ ಮಾಡುವವರು ತಮ್ಮ ಮೂಲಸೌಕರ್ಯವನ್ನು ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳ ಜೊತೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿರುವುದರ ಪರಿಣಾಮವಾಗಿ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸಲು ಹೆಚ್ಚುವರಿ ಮೂಲಸೌಕರ್ಯ ನಿರ್ಮಾಣದ ಅಗತ್ಯ ಕಡಿಮೆ ಆಗಲಿದೆ ಎಂದು ಕೇಂದ್ರ ಹೇಳಿದೆ.