ಪೆರ್ಲ : ಅಡಿಕೆ ಸಸಿಗಳನ್ನು ಹೇರಿಕೊಂಡು ಬರುವ ನಡುವೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪಿಕ್ ಆಪ್ ಟೆಂಪೊಕ್ಕೆ ಕರ್ನಾಟಕ ಸಾರಿಗೆ (ಕೆಎಸ್ಸಾರ್ಟಿಸಿ) ಬಸ್ಸು ಡಿಕ್ಕಿಯಾಗಿ ಪಿಕ್ ಆಪ್ ಚಾಲಕ ದಾರುಣವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಇಂದು (ಮಂಗಳವಾರ) ಬೆಳಗ್ಗೆ 9.15 ಗಂಟೆಯ ಸುಮಾರಿಗೆ ಅಡ್ಕಸ್ಥಳ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದ್ದು ಮಣಿಯಂಪಾರೆ ನಿವಾಸಿ ಮುಸ್ತಾಫ ಪಜ್ಜಾನ (43) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಎದುರಿನಿಂದ ಬಂದ ಕಾರೊಂದನ್ನು ತಪ್ಪಿಸುವ ರಭಸದಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಪಿಕ್ ಆಪ್ ಗೆ ಬಡಿದಿದ್ದು ತಲೆಗೆ ತೀವ್ರ ಗಾಯಗೊಂಡಿರುವ ಮುಸ್ತಫಾರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ದರು ಜೀವ ಉಳಿಸಲಾಗಿಲ್ಲ. ಇವರು ಸಹ ಕೆಲಸಗಾರರೊಂದಿಗೆ ಅಡಿಕೆ ಸಸಿ ತರಲು ತೆರಳಿರುವ ವೇಳೆ ಈ ದುರ್ಘಟನೆ ಸಂಭವಿಸಿದ್ದು ಜತೆಗಿದ್ದ ಇನ್ನೊರ್ವರಿಗೂ ಗಾಯಗಳಾಗಿರುವ ಬಗ್ಗೆ ತಿಳಿದು ಬಂದಿದೆ. ಬದಿಯಡ್ಕ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸರಣಿ ಅಪಘಾತಗಳಿಂದ ಆಘಾತ:
ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಪಳ್ಳತ್ತಡ್ಕದಲ್ಲಿ ಸೋಮವಾರ ಸಂಜೆ ನಡೆದ ಭೀಕರ ಅಪಘಾತದಲ್ಲಿ ಅಟೋಕ್ಕೆ ಶಾಲಾ ಬಸ್ ಡಿಕ್ಕಿಯಾಗಿ ಅಟೋದಲ್ಲಿದ್ದ ನಾಲ್ವರು ಮಹಿಳೆಯರ ಸಹಿತ ಐವರು ಮೃತಪಟ್ಟ ಘಟನೆ ನಡೆದಿತ್ತು. ಇಂದೀಗ ಪಳ್ಳತ್ತಡ್ಕದಿಂದ ಸುಮಾರು 15 ಕಿಲೋಮೀಟರ್ ಅಂತರದಲ್ಲಿ ಮತ್ತೊಂದು ಅಪಘಾತ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ತಿರುವು-ಮುರುವುಗಳ ರಸ್ತೆ ಹಾಗೂ ಅವೈಜ್ಞಾನಿಕ ರಸ್ತೆ ಕಾಮಗಾರಿ-ನಿರ್ವಹಣೆ ಕಾರಣ ಈ ರಸ್ತೆ ಸೂಕ್ಷ್ಮ ರಸ್ತೆಯೆಂದೇ ಪರಿಗಣಿಸಲಾಗಿತ್ತು.