ಇತ್ತೀಚಿನ ದಿನಗಳಲ್ಲಿ ಕೂದಲು ಉದುರೋ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಹೆಚ್ಚಾಗಿದೆ. ಇದಕ್ಕೆ ಮುಖ್ಯವಾಗಿ ನಮ್ಮ ಜೀವನ ಶೈಲಿ ಕಾರಣ ಅಂತ ಹೇಳಿದ್ರೂ ತಪ್ಪಾಗೋದಿಲ್ಲ. ಇದ್ರ ಜೊತೆಗೆ ಸಿಕ್ಕ ಸಿಕ್ಕ ಪ್ರಾಡಕ್ಟ್ ಗಳನ್ನು ಕೂದಲಿಗೆ ಅನ್ವಯಿಸುವುದರಿಂದಲೂ ಕೂಡ ಕೂದಲು ಉದುರೋದಕ್ಕೆ ಕಾರಣವಾಗುತ್ತದೆ. ಹೊರಗಿನ ಜಂಕ್ ಫುಡ್ ಗಳ ಅತಿಯಾದ ಸೇವನೆಯೂ ಕೂಡ ನಮ್ಮ ಕೂದಲು ಹಾಗೂ ಚರ್ಮದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಕೂದಲು ಸುಂದರವಾಗಿ, ಬಲವಾಗಿ, ಸೊಂಪಾಗಿ ಬೆಳೆಯಬೇಕೆಂದರೆ ಕೂದಲಿಗೆ ಪ್ರೋಟೀನ್, ಜೀವಸತ್ವಗಳು, ಖನಿಜಗಳು, ಒಮೆಗಾ-3 ಕೊಬ್ಬಿನಾಮ್ಲಗಳು ಇತ್ಯಾದಿಗಳ ಅವಶ್ಯಕತೆ ತುಂಬಾನೇ ಇದೆ. ಅಷ್ಟಕ್ಕೂ ನಿಮ್ಮ ಕೂದಲು ಆರೋಗ್ಯಯುತವಾಗಿ ಮತ್ತು ಹೊಳೆಯುವಂತೆ ಮಾಡಲು ಯಾವೆಲ್ಲಾ ಆಹಾರಗಳು ಸೇವನೆ ಮಾಡ್ಬೇಕು ಅನ್ನೋದನ್ನು ತಿಳಿಯೋಣ.
ಮುಖ್ಯವಾಗಿ ಕೂದಲಿನ ರಚನೆಯಲ್ಲಿ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ, ಏಕೆಂದರೆ ಕೂದಲಿನ ರಚನೆ, ಬೆಳವಣಿಗೆ ಮತ್ತು ಬಲಕ್ಕೆ ಪ್ರೋಟೀನ್ ಅತ್ಯಗತ್ಯ. ಉತ್ತಮ ಮೂಲದಿಂದ ಪ್ರೋಟೀನ್ ಪಡೆಯಲು, ಕಡಲೆಕಾಯಿ, ಸೋಯಾಬೀನ್, ಮೊಸರು, ಮೊಟ್ಟೆ, ಸೊಪ್ಪು ಮಾಂಸ, ಕೊತ್ತಂಬರಿ-ಪುದೀನ ಮತ್ತು ಚೀಸ್ ಅನ್ನು ಸೇವಿಸಿ.
ಒಮೆಗಾ -3 ಕೊಬ್ಬಿನಾಮ್ಲಗಳು ಉತ್ತಮ!
ಒಮೆಗಾ-3 ಕೊಬ್ಬಿನಾಮ್ಲಗಳು ಕೂದಲಿನ ಆರೋಗ್ಯಕ್ಕೆ ಮುಖ್ಯವಾಗಿದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಅವುಗಳನ್ನು ಬಲಪಡಿಸುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು ಎಳ್ಳು, ಅಗಸೆಬೀಜ, ಬೆಣ್ಣೆ, ಮೀನು ಮತ್ತು ವಾಲ್ನಟ್ ಗಳಲ್ಲಿ ಕಂಡುಬರುತ್ತವೆ. ಇದು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯಕಾರಿಯಾಗಿದೆ.
ಉದ್ದ ಕೂದಲು ಬೇಕಿದ್ದರೆ ಬಿ-ಕಾಂಪ್ಲೆಕ್ಸ್ ಸೇವಿಸಿ!
ಬಿ-ಕಾಂಪ್ಲೆಕ್ಸ್, ಬಿ ಜೀವಸತ್ವಗಳ ಸಮೃದ್ಧ ಮೂಲವಾಗಿದೆ. ಮತ್ತು ಆರೋಗ್ಯಕರ ಕೂದಲನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ 12, ಬಯೋಟಿನ್ (ವಿಟಮಿನ್ ಬಿ 7), ಫೋಲಿಕ್ ಆಮ್ಲ (ವಿಟಮಿನ್ ಬಿ 9) ಇತ್ಯಾದಿಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮೊಳಕೆ ಕಾಳುಗಳು, ಆಲೂಗಡ್ಡೆ, ಕ್ಯಾರೆಟ್ ಮತ್ತು ಕೋಸುಗಡ್ಡೆಗಳನ್ನು ತಿನ್ನುವುದರಿಂದ ಕೂಡ ಬಿ-ಕಾಂಪ್ಲೆಕ್ಸ್ ಅನ್ನು ಒದಗಿಸುತ್ತದೆ.
ವಿಟಮಿನ್ ಇ ಸೇವಿಸಿ!
ವಿಟಮಿನ್ ಇ ಬಲವಾದ ಮತ್ತು ಆರೋಗ್ಯಕರ ಕೂದಲಿಗೆ ತುಂಬಾನೇ ಮುಖ್ಯಗಿದೆ. ಏಕೆಂದರೆ ಇದು ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದ್ದು ಅದು ಸ್ವತಂತ್ರ ರಾಡಿಕಲ್ಗಳ ಹಾನಿಕಾರಕ ಪರಿಣಾಮಗಳಿಂದ ಕೂದಲನ್ನು ರಕ್ಷಿಸುತ್ತದೆ. ಇದು ಕೂದಲನ್ನು ದಪ್ಪವಾಗಿಸಲು ಮತ್ತು ಅದರ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಇ ಗೋಡಂಬಿ, ಬಾದಾಮಿ, ಕಡಲೆಕಾಯಿ, ಸೋಯಾಬೀನ್ ಮತ್ತು ಎಳ್ಳಿನ ಎಣ್ಣೆಯಲ್ಲಿ ಕಂಡುಬರುತ್ತದೆ.
ಸರಿಯಾಗಿ ನೀರು ಕುಡಿಯಿರಿ!
ಆರೋಗ್ಯಕರ ಕೂದಲಿಗೆ ಸಾಕಷ್ಟು ಪ್ರಮಾಣದ ನೀರನ್ನು ಸೇವಿಸುವುದು ಬಹಳ ಮುಖ್ಯ. ಇದು ಕೂದಲಿಗೆ ತೇವಾಂಶವನ್ನು ನೀಡುತ್ತದೆ. ಮತ್ತು ಶುಷ್ಕತೆಯನ್ನು ಹೋಗಲಾಡಿಸುತ್ತದೆ.
ಕೂದಲಿನ ಆರೈಕೆ ಮಾಡುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ. ವಾರಕ್ಕೆ ಕಡಿಮೆ ಅಂದ್ರು ಎರಡು ಬಾರಿಯಾದರೂ ಎಣ್ಣೆ ಹಚ್ಚಿ ಸ್ನಾನ ಮಾಡಬೇಕು. ಹಾಗೂ ಬಿಸಿ ನೀರಿನಿಂದ ಯಾವುದೇ ಕಾರಣಕ್ಕೂ ಕೂದಲನ್ನು ತೊಳೆಯೋದಕ್ಕೆ ಹೋಗಬೇಡಿ.