ಈ ಕುರಿತು ನಿತೀಶ್ ಕುಮಾರ್ ಅವರಿಗೆ ಗುರುವಾರ ಪತ್ರ ಬರೆದಿರುವ ಸ್ವಾತಿ, ಪ್ರಕರಣವನ್ನು ಕಟ್ಟುನಿಟ್ಟಾಗಿ ತನಿಖೆ ನಡೆಸಬೇಕು ಹಾಗೂ ಅತ್ಯಾಚಾರ ಸಂತ್ರಸ್ತೆಗೆ ರಾಜ್ಯ ಸರ್ಕಾರವು ಕಾನೂನು ನೆರವನ್ನು ವಿಸ್ತರಿಸಿ, ಪರಿಹಾರ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.
ತೀವ್ರತರವಾಗಿ ನೋವು ತಂದಿರುವ ಈ ಘಟನೆಯ ಕುರಿತು ಡಿಸಿಡಬ್ಲ್ಯು ದೂರನ್ನು ಸ್ವೀಕರಿಸಿದೆ ಎಂದೂ ಸ್ವಾತಿ ಹೇಳಿದ್ದಾರೆ.
'ಶಾಲಾ ವ್ಯವಸ್ಥಾಪಕರ ಮಗ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಎರಡು ವರ್ಷ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿಯು ವಿದ್ಯಾರ್ಥಿನಿಯ ವಿಡಿಯೊವನ್ನು ಚಿತ್ರೀಕರಿಸಿ, ಆಕೆಗೆ ಬೆದರಿಕೆಯನ್ನೂ ಒಡ್ಡಿದ್ದಾನೆ. ಶಾಲೆಯ ಮಹಿಳಾ ಪ್ರಾಂಶುಪಾಲರು ಈ ಅಪರಾಧ ಕೃತ್ಯವನ್ನು ಎಸಗಲು ಆರೋಪಿಗೆ ನಿರಂತರ ಸಹಾಯ ಮಾಡಿದ್ದಾರೆ ಎಂದೂ ದೂರುದಾರರು ಆರೋಪಿಸಿದ್ದಾರೆ' ಎಂದೂ ಸ್ವಾತಿ ಪತ್ರದಲ್ಲಿ ತಿಳಿಸಿದ್ದಾರೆ.
'ಈ ಕುರಿತು ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಆದಾಗ್ಯೂ, ಇದುವರೆಗೆ ಬಿಹಾರ ಸರ್ಕಾರದಿಂದ ಒಬ್ಬರೂ ಸಂತಸ್ತೆಯನ್ನು ಭೇಟಿಯಾಗಿಲ್ಲ ಎಂದೂ ಡಿಸಿಡಬ್ಲ್ಯುಗೆ ಮಾಹಿತಿ ನೀಡಲಾಗಿದೆ. ಸಂತ್ರಸ್ತೆಗೆ ಯಾವುದೇ ನೆರವಾಗಲೀ, ಪರಿಹಾರವಾಗಲೀ ತಲುಪಿಲ್ಲ. ಅಲ್ಲದೇ, ಪ್ರಕರಣದ ತನಿಖೆ ನಡೆಸುತ್ತಿರುವ ವಿಧಾನದ ಬಗ್ಗೆ ಸಂತ್ರಸ್ತೆಯ ಕುಟುಂಬದವರು ಕಳವಳ ವ್ಯಕ್ತಪಡಿಸಿದ್ದಾರೆ' ಎಂದೂ ಅವರು ಹೇಳಿದ್ದಾರೆ.
ಹೃದಯ ಹಿಂಡುವಂಥ ಈ ಪ್ರಕರಣದಲ್ಲಿ ಸಂತಸ್ತೆಯು ದೈಹಿಕ-ಮಾನಸಿಕವಾಗಿ ತೀವ್ರವಾಗಿ ಆಘಾತಕ್ಕೊಳಗಾಗಿದ್ದಾಳೆ ಎಂದಿರುವ ಸ್ವಾತಿ, ಸರ್ಕಾರವು ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಬೇಕು. ಸಂತ್ರಸ್ತೆಗೆ ಕಾನೂನು ನೆರವು ನೀಡಲು ಸರ್ಕಾರವು ವಿಶೇಷ ಅಭಿಯೋಜಕರನ್ನು ನೇಮಿಸಿ, ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು' ಎಂದು ಒತ್ತಾಯಿಸಿದ್ದಾರೆ.
ಸಂತ್ರಸ್ತೆಗೆ ಅಗತ್ಯವಿರುವ ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿಯನ್ನು ಸರ್ಕಾರವು ಕಲ್ಪಿಸಬೇಕು. ಸರ್ಕಾರದ ಹಿರಿಯ ಪ್ರತಿನಿಧಿಯೊಬ್ಬರು ಸಂತ್ರಸ್ತೆ ಹಾಗೂ ಅವರ ಕುಟುಂಬವನ್ನು ಭೇಟಿ ಮಾಡಿ, ಸಾಧ್ಯವಿರುವ ಎಲ್ಲಾ ನಿಟ್ಟಿನಲ್ಲೂ ಅವರಿಗೆ ಸಹಾಯ ಮಾಡಬೇಕು' ಎಂದೂ ಸ್ವಾತಿ ಮಾಲೀವಾಲ್ ಅವರು ಪತ್ರದಲ್ಲಿ ಬಿಹಾರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.