ಭೋಪಾಲ್: ತುಷ್ಟೀಕರಣ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಕಾಂಗ್ರೆಸ್ ಪಕ್ಷ "ತುಕ್ಕು ಹಿಡಿದ ಕಬ್ಬಿಣ"ದಂತಾಗಿದೆ. ಅವರಿಗೆ ಅಧಿಕಾರ ನೀಡಿದರೆ ಮಧ್ಯ ಪ್ರದೇಶವನ್ನು ಬಿಮರು ವರ್ಗಕ್ಕೆ ತಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪ್ರತಿಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭಾ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ಭೋಪಾಲ್‌ನ ಜಾಂಬೋರಿ ಮೈದಾನದಲ್ಲಿ ಬಿಜೆಪಿಯ 'ಕಾರ್ಯಕರ್ತ ಮಹಾಕುಂಬ್' ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು "ಘಮಾಂಡಿಯಾ" ಬ್ಲಾಕ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಬಲವಂತದಿಂದ ಬೆಂಬಲಿಸಿವೆ. ಅವರು "ನಾರಿ ಶಕ್ತಿ"ಯನ್ನು ಈಗ ಅರ್ಥಮಾಡಿಕೊಂಡಿದ್ದಾರೆ ಎಂದರು.
ಅವಕಾಶ ಸಿಕ್ಕರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಈ ಮಸೂದೆಯಿಂದ ಕಾಂಗ್ರೆಸ್ ಹಿಂದೆ ಸರಿಯಲಿದೆ ಎಂದರು.
ಸಾವಿರಾರು ಕೋಟಿ ಹಗರಣಗಳ ಇತಿಹಾಸ ಮತ್ತು ವೋಟ್ ಬ್ಯಾಂಕ್ ತುಷ್ಟೀಕರಣದ ಇತಿಹಾಸ ಹೊಂದಿರುವ ಕಾಂಗ್ರೆಸ್‌ನಂತಹ ವಂಶಾಡಳಿತ ಪಕ್ಷಕ್ಕೆ ಅಧಿಕಾರ ಸಿಕ್ಕರೆ ಮಧ್ಯ ಪ್ರದೇಶಕ್ಕೆ ದೊಡ್ಡ ನಷ್ಟವಾಗಲಿದೆ. ಕಾಂಗ್ರೆಸ್ ಅಧಿಕಾರ ಹಿಡಿದ ಪ್ರತಿ ರಾಜ್ಯವನ್ನು ಹಾಳು ಮಾಡಿದೆ. ಲೂಟಿ ಮಾಡಿ ವಿನಾಶ ತರಲು ಕಾಂಗ್ರೆಸ್‌ಗೆ ಅವಕಾಶ ನೀಡಬೇಡಿ. ಮಧ್ಯ ಪ್ರದೇಶಕ್ಕೆ ಮತ್ತೆ ಕಾಯಿಲೆ ತರಬೇಡಿ ಎಂದು ಮೋದಿ ಹೇಳಿದರು.
"ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ನು ಬಲವಂತದಿಂದ ಬೆಂಬಲಿಸಿವೆ. ಪ್ರತಿಪಕ್ಷಗಳ ಉದ್ದೇಶದಲ್ಲಿ ಲೋಪವಿದೆ. ದುರಹಂಕಾರಿ ಮೈತ್ರಿಕೂಟ ಬಲವಂತದಿಂದ ಬೆಂಬಲ ನೀಡಿದ್ದು, ಇದೀಗ ದುರಹಂಕಾರಿ ಮೈತ್ರಿಕೂಟ ಹೊಸ ಆಟವಾಡಲಿದೆ. ಮಹಿಳಾ ಶಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯಲಿದೆ ಎಂದು ಆರೋಪಿಸಿದರು.