ತಿರುವನಂತಪುರಂ: ಸಾಂಪ್ರದಾಯಿಕ ಕರಕುಶಲ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಜನರನ್ನು ಬೆಂಬಲಿಸುವಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್.ಜಯಶಂಕರ್ ಹೇಳಿದ್ದಾರೆ.
ನಾಡಿನ ಸಂಸ್ಕೃತಿ, ಪರಂಪರೆಯನ್ನು ಉಳಿಸುವಲ್ಲಿ ವಿಶ್ವಕರ್ಮರು ತಮ್ಮ ಕೈಂಕರ್ಯಗಳ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದಾರೆ ಎಂದರು.
ಅವರು ತಿರುವನಂತಪುರದಲ್ಲಿ ನಡೆದ 'ಪಿಎಂ ವಿಶ್ವಕರ್ಮ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಕಾರ್ಯಕ್ರಮವನ್ನು ರೈಲ್ವೆ ಸಚಿವಾಲಯ ಮತ್ತು ಕೇಂದ್ರ ಎಂಎಸ್‍ಎಂಇ ಸಚಿವಾಲಯ ಜಂಟಿಯಾಗಿ ಆಯೋಜಿಸಿದೆ. ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಮಾರುಕಟ್ಟೆಗೆ ಹೋಗಿ ತಮ್ಮ ಉತ್ಪನ್ನಗಳನ್ನು ಹರಡಲು ವಿಶ್ವಕರ್ಮ ಯೋಜನೆ ಸಹಕಾರಿಯಾಗಲಿದೆ ಎಂದರು.
ಸಾಂಪ್ರದಾಯಿಕ ಕುಶಲಕರ್ಮಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಜನರ ಮನಸ್ಸನ್ನು ಅರಿತು ಕರಕುಶಲ ಉತ್ಪನ್ನಗಳನ್ನು ಉತ್ಪಾದಿಸುವ ಸಾಮಥ್ರ್ಯವನ್ನು ಸಚಿವರು ಶ್ಲಾಘಿಸಿದರು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ವಿಶ್ವಕರ್ಮರಿಗೆ ಆರ್ಥಿಕ ನೆರವು ನೀಡುವುದಲ್ಲದೆ ತರಬೇತಿ, ಮಾರುಕಟ್ಟೆ ಅವಕಾಶ ಇತ್ಯಾದಿಗಳನ್ನು ಒದಗಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. 'ಲೋಕಲ್ ಫಾರ್ ವೋಕಲ್', 'ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್' ಮತ್ತು 'ಮೇಕ್ ಇನ್ ಇಂಡಿಯಾ' ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಮುಖ ಅಂಶಗಳಾಗಿವೆ ಎಂದು ಅವರು ಹೇಳಿದರು. ಜಿ20 ಅಂಗವಾಗಿ ನಡೆದ ಕರಕುಶಲ ವಸ್ತುಪ್ರದರ್ಶನದಲ್ಲಿ ಭಾರತದ ಪುರಾತನ ಸಂಸ್ಕೃತಿಯನ್ನು ವಿಶ್ವದ ನಾಯಕರ ಮುಂದೆ ಪ್ರದರ್ಶಿಸಲಾಯಿತು ಎಂದು ಡಾ.ಎಸ್.ಜಯಶಂಕರ್ ಹೇಳಿದರು. ಇದರಿಂದ ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ದ್ವಾರಕಾ ಯಶೋಭೂಮಿಯಲ್ಲಿ ನೆರವೇರಿಸಿದ ವಿಶ್ವಕರ್ಮ ಯೋಜನೆಯ ಉದ್ಘಾಟನಾ ಸಮಾರಂಭವನ್ನು ಕಾರ್ಯಕ್ರಮದಲ್ಲಿ ನೇರಪ್ರಸಾರ ಮಾಡಲಾಯಿತು.
ದಕ್ಷಿಣ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ಎಸ್.ಎಂ.ಶರ್ಮಾ, ತಿರುವನಂತಪುರಂ ಜಿಲ್ಲಾಧಿಕಾರಿ ಜೆರೊಮಿಕ್ ಜಾರ್ಜ್ ಮತ್ತಿತರರು ಉಪಸ್ಥಿತರಿದ್ದರು.
ಲಕ್ಷದ್ವೀಪ ಮತ್ತು ಕೊಚ್ಚಿಯಲ್ಲಿ ನಡೆದ ಪ್ರಧಾನ ಮಂತ್ರಿ ವಿಶ್ವಕರ್ಮ ಕಾರ್ಯಕ್ರಮಗಳಲ್ಲಿ ಕೇಂದ್ರ ರಾಜ್ಯ ಸಚಿವ ದರ್ಶನ ಜರ್ದೋಶ್ ಮತ್ತು ಕಯರ್ ಬೋರ್ಡ್ ಅಧ್ಯಕ್ಷ ಕುಪು ರಾಮು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.