ತಿರುವನಂತಪುರ: ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ತಂಡಗಳು ಕೇರಳಕ್ಕೆ ಇಂದು ಆಗಮಿಸಲಿದ್ದು, ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ನಿಪಾ ಪರೀಕ್ಷೆ ಮತ್ತು ಬಾವಲಿಗಳ ಸಮೀಕ್ಷೆಯನ್ನು ಕೈಗೊಳ್ಳಲು ಮೊಬೈಲ್ ಲ್ಯಾಬ್ ಅನ್ನು ಸ್ಥಾಪಿಸಲಿವೆ ಎಂದು ಕೇರಳ ಸರ್ಕಾರ ಬುಧವಾರ ಅಲ್ಲಿನ ವಿಧಾನಸಭೆಗೆ ತಿಳಿಸಿದೆ.
ಕೋಯಿಕ್ಕೋಡ್ ಜಿಲ್ಲೆಯ ನಾಲ್ವರಲ್ಲಿ ನಿಪಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಧಾನಸಭೆಯಲ್ಲಿ ನಿಪಾ ಸೋಂಕಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕೇರಳದಲ್ಲಿ ಪತ್ತೆಯಾಗಿರುವ ನಿಪಾ ವೈರಸ್ ಬಾಂಗ್ಲಾದೇಶದಲ್ಲಿ ಕಂಡುಬಂದ ರೂಪಾಂತರ ತಳಿಯಾಗಿದ್ದು, ಅದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಕಡಿಮೆ ಸಾಂಕ್ರಾಮಿಕವಾಗಿದ್ದರೂ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ ಎಂದು ತಿಳಿಸಿದ್ಧಾರೆ.
ಪುಣೆಯ ಎನ್‌ಐವಿ ತಂಡಗಳಲ್ಲದೆ, ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಗುಂಪು ಇಂದು ಚೆನ್ನೈನಿಂದ ಕೇರಳಕ್ಕೆ ಬಂದು ಸಮೀಕ್ಷೆ ನಡೆಸಲಿದೆ ಎಂದು ಜಾರ್ಜ್ ಹೇಳಿದ್ದಾರೆ.
ನಿಪಾ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಮೊನೊಕ್ಲೋನಲ್ ಪ್ರತಿಕಾಯಗಳನ್ನು ಕಳುಹಿಸಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಒಪ್ಪಿಕೊಂಡಿದೆ ಎಂದು ಅವರು ಸದನಕ್ಕೆ ತಿಳಿಸಿದ್ದಾರೆ.
ಮೆದುಳಿಗೆ ಹಾನಿ ಮಾಡುವ ನಿಪಾ ವೈರಸ್ ಸೋಂಕಿತರ ಕಣ್ಗಾವಲು, ಸೋಂಕಿತರ ಸಂಪರ್ಕ ಪತ್ತೆಹಚ್ಚುವಿಕೆ, ಹರಡುವಿಕೆ ತಗ್ಗಿಸಲು ಅಪಾಯದ ಸ್ಥಳಗಳನ್ನು ಗುರುತಿಸುವುದು, ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸುವುದು, ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸುವುದು ಮತ್ತು ಸೋಂಕಿತರಿಗೆ ಐಸಿಎಂಆರ್‌ನಿಂದ ಔಷಧಿಗಳನ್ನು ಖರೀದಿಸುವುದು ಸೇರಿದಂತೆ ವೈರಸ್ ತಡೆಗೆ ಆರೋಗ್ಯ ಇಲಾಖೆಯು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಜಾರ್ಜ್ ತಿಳಿಸಿದರು.