ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಒಪ್ಪಿಗೆ ಸೂಚಿಸಿದ್ದಾರೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಶುಕ್ರವಾರ ಹೊರಡಿಸಿರುವ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಿದೆ.
'ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆಯ ಮೂಲಕ ಪ್ರಕಟಿಸುವ ದಿನಾಂಕದಿಂದ ಮೀಸಲಾತಿ ಜಾರಿಗೆ ಬರಲಿದೆ' ಎಂದು ಹೇಳಲಾಗಿದೆ.
'ಮುಂದಿನ ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆ ನಡೆಯಬೇಕಿರುವುದರಿಂದ ಈ ಕಾಯ್ದೆ ಜಾರಿಗೂ ಪೂರ್ವದಲ್ಲಿ ಕಾನೂನು ಇಲಾಖೆ ಒಂದಷ್ಟು ಸಮಯ ತೆಗೆದುಕೊಳ್ಳಲಿದೆ. ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಮರು ವಿಂಗಡನೆ ನಂತರ ಮಹಿಳೆಯರಿಗಾಗಿ ನಿರ್ದಿಷ್ಟ ಕ್ಷೇತ್ರಗಳನ್ನು ಮೀಸಲಿಡಲಾಗುವುದು. ಈ ಮೀಸಲಾತಿ ಮುಂದಿನ 15 ವರ್ಷದವರೆಗೆ ಮುಂದುವರಿಯಲಿದೆ. ನಂತರ ಇದನ್ನು ವಿಸ್ತರಿಸಲು ಸಾಧ್ಯವಿದೆ' ಎಂದು ಸಚಿವಾಲಯ ಹೇಳಿದೆ.
ಈ ಮೀಸಲಾತಿ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಒಳ ಮೀಸಲಾತಿಯೂ ಇದೆ. ಹಿಂದುಳಿದ ವರ್ಗಗಳಿಗೂ ಮೀಸಲಾತಿ ವಿಸ್ತರಿಸಬೇಕು ಎಂಬುದು ವಿರೋಧ ಪಕ್ಷಗಳ ಬೇಡಿಕೆಯಾಗಿತ್ತು. 1996ರಿಂದ ಈ ಮಸೂದೆ ಜಾರಿಗೆ ಬಹಳಷ್ಟು ಪ್ರಯತ್ನಗಳು ನಡೆದಿದ್ದವು. 2010ರಲ್ಲೂ ಮಸೂದೆ ಮಂಡನೆ ಪ್ರಯತ್ನ ನಡೆದಿತ್ತು. ಆದರೆ ಆಗ ಅದು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲಿಲ್ಲ.
ಲೋಕಸಭೆಯಲ್ಲಿ ಮಹಿಳೆಯರ ಸಂಖ್ಯೆ ಶೇ 15ರಷ್ಟು ಹಾಗೂ ವಿಧಾನಸಭೆಯಲ್ಲಿ ಶೇ 10ರಷ್ಟು ಮಾತ್ರ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆದ ಸಂಸತ್ ವಿಶೇಷ ಅಧಿವೇಶನದಲ್ಲಿ 'ನಾರಿ ಶಕ್ತಿ ವಂದನಾ ಅಧಿನಿಯಮ'ವನ್ನು ಮಂಡಿಸಿದ್ದರು. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈ ಮಸೂದೆಯು ಬಹುಮತದೊಂದಿಗೆ ಅಂಗೀಕಾರಗೊಂಡಿತು.