ಕಾಸರಗೋಡು: ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಪಾತ್ತಿಕರ ಆನಮಙಲ್ ನಿವಾಸಿ ಸದಾನಂದನ್ ಕುಟುಂಬದ ಸ್ವಂತ ಮನೆಯ ಕನಸನ್ನು ಸೇವಾಭಾರತಿ ನನಸಾಗಿಸಿದೆ. ಸೇವಾಭಾರತಿ ಎಳೇರಿ ಮತ್ತು ಬಳಾಲ್ ಪಂಚಾಯಿತಿ ಸಮಿತಿ ಸದಾನಂದನ್ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿದೆ.
ಪತ್ನಿ, ಇಬ್ಬರು ಮಕ್ಕಳನ್ನು ಹೊಂದಿರುವ ಸದಾನಂದನ್ ಕುಟುಂಬ ಹತ್ತು ಸೆಂಟ್ಸ್ ಜಮೀನಿನಲ್ಲಿ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲಿ ವಾಸಿಸುತ್ತಿದ್ದರೂ, ವೆಸ್ಟ್ ಎಳೇರಿ ಗ್ರಾಮ ಪಂಚಾಯಿತಿ, ಸರ್ಕಾರದ ವಸತಿಯೋಜನೆಯನ್ವಯ ಇವರಿಗೆ ಮನೆ ಮಂಜೂರುಗೊಳಿಸಲು ಮುಂದಾಗಿರಲಿಲ್ಲ. ಆದ್ಯತಾ ಪಟ್ಟಿಯಲ್ಲಿ ಸದಾನಂದನ್ ಹೆಸರಿದ್ದರೂ, ಇದನ್ನು ಮೀರಿ ಬೇರೆಯವರಿಗೆ ಮನೆ ನಿರ್ಮಿಸಿಕೊಟ್ಟಿರುವುದಾಗಿ ದೂರು ವ್ಯಾಪಕಗೊಂಡಿತ್ತು. ಹತ್ತು ವರ್ಷದ ಹಿಂದೆ ಬಾವಿ ನಿರ್ಮಾಣದ ಕೆಲಸದ ಮಧ್ಯೆ ಬಿದ್ದು ಗಾಯಗೊಂಡಿದ್ದ ಸದಾನಂದನ್ ಇಂದಿಗೂ ಚಿಕಿತ್ಸೆಯಲ್ಲೇ ಮುಂದುವರಿದಿದ್ದಾರೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೆಲಸಕ್ಕೆ ತೆರಳುತ್ತಿರುವ ಇವರ ಪತ್ನಿ ಅಂಬಿಕಾ ಕುಟುಂಬಕ್ಕೆ ಏಕ ಆಸರೆಯಾಗಿದ್ದಾರೆ. ಟಾರ್ಪಾಲ್ ಹೊದಿಸಿದ ಜೋಪಡಿಯಲ್ಲಿ ಕಳೆಯುತ್ತಿದ್ದರೂ, ಇವರ ದಯನೀಯ ಸ್ಥಿತಿಯನ್ನು ಸರ್ಕಾರ ಮನಗಾಣಲೇ ಇಲ್ಲ. ಹಲವು ಬಾರಿ ಮನೆಗಾಗಿ ಅರ್ಜಿ ಸಲ್ಲಿಸಿ, ವಿವಿಧ ಕಚೇರಿ ಅಲೆದಾಡಿದರೂ ಪ್ರಯೋಜನವಾಗದಿದ್ದಾಗ ಸೇವಾ ಭಾರತಿ ಇವರ ನೆರವಿಗೆ ಬಂದಿದೆ.
ಪನತ್ತಡಿಯಲ್ಲಿ ಹಳೇವಿದ್ಯಾರ್ಥಿ ಸಂಘದ ನೆರವಿನಿಂದ ಖರೀದಿಸಿದ ಜಾಗದಲ್ಲಿ ಹೊಸ ನಿರ್ಮಿಸಲಾಗಿದೆ. ನೂತನ ಮನೆಯ ಗೃಹಪ್ರವೇಶ ಸೆ. 10ರಂದು ಬೆಳಗ್ಗೆ 9.30ಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ರವಿಶತಂತ್ರಿ ಕುಂಟಾರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ಪಿ. ಬಾಬು ಕುಟುಂಬದವರಿಗೆ ಕೀಲಿಕೈ ಹಸ್ತಾಂತರಿಸಲಿದ್ದಾರೆ.