ನವದೆಹಲಿ: ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದಿರುವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್ ಅವರು, ತಮ್ಮ ಪಕ್ಷ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಇತರರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂದು ಸೋಮವಾರ ಹೇಳಿದ್ದಾರೆ.
ಉದಯನಿಧಿ ಹೇಳಿಕೆಗೆ ಬಗ್ಗೆ ಕಾಂಗ್ರೆಸ್ ನಾಯಕರ ಮೌನವನ್ನು ಬಿಜೆಪಿ ಪ್ರಶ್ನಿಸಿತ್ತು. ವಿರೋಧ ಪಕ್ಷವು ಹಿಂದೂ ಧರ್ಮದ ವಿರುದ್ಧವಾಗಿದೆ ಎಂದು ಆರೋಪಿಸುತ್ತಿದ್ದಂತೆ ಕಾಂಗ್ರೆಸ್ ಈ ಪ್ರತಿಕ್ರಿಯೆ ನೀಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮಾತನಾಡಿ, ಕಾಂಗ್ರೆಸ್ ನಿಲುವು ಸ್ಪಷ್ಟವಾಗಿದ್ದರೂ ಉಳಿದೆಲ್ಲ ರಾಜಕೀಯ ಪಕ್ಷಗಳಿಗೆ ತನ್ನದೇ ಆದ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
"ವಾಸ್ತವವಾಗಿ, ನಮ್ಮ ದೃಷ್ಟಿಕೋನವು ತುಂಬಾ ಸ್ಪಷ್ಟವಾಗಿದೆ - 'ಸರ್ವಧರ್ಮ ಸಂಭವ' (ಎಲ್ಲಾ ಧರ್ಮಗಳಿಗೆ ಸಮಾನ ಗೌರವ) ಕಾಂಗ್ರೆಸ್ ಸಿದ್ಧಾಂತವಾಗಿದೆ. ಆದರೆ, ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಿಪಡಿಸಲು ಸ್ವಾತಂತ್ರ್ಯವಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು". ನಾವು ಪ್ರತಿಯೊಬ್ಬರ ನಂಬಿಕೆಗಳನ್ನು ಗೌರವಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.