ತಿರುವನಂತಪುರಂ: ತನ್ನ ಮೇಲೆ ದಾಳಿ ನಡಿದಿದ್ದು, ಹಲ್ಲೆ ಮಾಡಿದವರು ಬೆನ್ನ ಮೇಲೆ ಪಿಎಫ್ಐ ಎಂದು ದೂರಿದ್ದ ಯೋಧ ಕೇವಲ ಪ್ರಚಾರ ಪ್ರಿಯತೆಯಾಗಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಘಟನೆ ನಡೆದಿದೆ ಎಂದು ಯೋಧ ಸುಳ್ಳು ಹೇಳಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಯೋಧ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವದೇ ಬಂಧನವಾಗಿಲ್ಲ ಮತ್ತು ಯೋಧ ಶೈನ್ ಕುಮಾರ್ ಮತ್ತು ಅವರ ಸ್ನೇಹಿತನ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಅವರ ಹೇಳಿಕೆಗಳ ವಿಷಯಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಕುಮಾರ್ ಹೆಸರುವಾಸಿಯಾಗಲು ಬಯಸಿದ್ದರು ಮತ್ತು ಅದಕ್ಕಾಗಿಯೇ ಈ ಸಂಪೂರ್ಣ ಕೃತ್ಯವನ್ನು ನಡೆಸಲಾಗಿದೆ ಎಂದು ಯೋಧನ ಸ್ನೇಹಿತ ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೀತಿ ಸುಳ್ಳು ಹೇಳಿಕೆ ನೀಡಲು ಯೋಧ ನಾನಾ ಕಾರಣಗಳನ್ನು ನೀಡುತ್ತಿದ್ದು, ಅವುಗಳನ್ನು ಪರಿಶೀಲಿಸಬೇಕಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.