ತಿರುವನಂತಪುರಂ: ರಾಜ್ಯದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಸಾಂಕ್ರಾಮಿಕ ಜ್ವರಗಳ ವಿರುದ್ಧ ನಿಗಾ ವಹಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.
ಸಾಂಕ್ರಾಮಿಕ ಜ್ವರಗಳು ಬರದಂತೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಆಸ್ಪತ್ರೆಗಳಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
“ರಾಜ್ಯದಲ್ಲಿ ಪ್ರವಾಹಕ್ಕೆ ಒಳಗಾದಲ್ಲಿರುವ ಆರೋಗ್ಯ ಕೇಂದ್ರಗಳು ಅಗತ್ಯ ಪರ್ಯಾಯ ವ್ಯವಸ್ಥೆಗಳನ್ನು ಮಾಡಬೇಕು. ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನವನ್ನು ನೀಡಲಾಗಿದೆ. ಆಲಪ್ಪುಳ ಕುಟ್ಟನಾಡ್ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು 3 ಮೊಬೈಲ್ ಪ್ಲೋಟಿಂಗ್ ಡಿಸ್ಪೆನ್ಸರಿಗಳನ್ನು(ತೇಲುವ ಔಷಧಾಲಯ) ಮತ್ತು ಜಲ ಸಂಚಾರದ ಆಂಬ್ಯುಲೆನ್ಸ್ ಅನ್ನು ಸ್ಥಾಪಿಸಲಾಗಿದೆ.
ಮುಂದುವರಿದ ಮಳೆಯಿಂದಾಗಿ ಡೆಂಗ್ಯೂ ಮತ್ತು ಇತರ ಸಾಂಕ್ರಾಮಿಕ ಜ್ವರ ಬರುವ ಸಾಧ್ಯತೆಯಿದೆ. ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸಿ. ಸೊಳ್ಳೆಗಳ ಮೂಲಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳಬೇಕು. ಇಲಿಜ್ವರ ತಡೆಗಟ್ಟುವಿಕೆ ಮುಖ್ಯವಾಗಿದೆ. ಕೆಸರು, ಕೊಳಕು ನೀರು ಅಥವಾ ನಿಂತ ಮಳೆನೀರಿಗೆ ಕಾಲಿಟ್ಟರೆ ಇಲಿಜ್ವರ ನಿಯಂತ್ರಣ ಮಾತ್ರೆಯಾದ ಡಾಕ್ಸಿಸೈಕ್ಲಿನ್ ತೆಗೆದುಕೊಳ್ಳಬೇಕು.
ಅತಿಸಾರ ರೋಗಗಳ ವಿರುದ್ಧ ಜಾಗರೂಕರಾಗಿರಿ. ಕುದಿಸಿದ ನೀರನ್ನೇ ಕುಡಿಯಬೇಕು. ಆಹಾರ ಮತ್ತು ನೀರನ್ನು ಮುಚ್ಚಿಡಬೇಕು. ಪರಿಹಾರ ಶಿಬಿರದಲ್ಲಿರುವವರು ಮಾಸ್ಕ್ ಧರಿಸುವುದು ಉತ್ತಮ. ಜ್ವರ ಇದ್ದರೆ ಸ್ವಯಂ-ಔಷಧಿ ಮಾಡಬಾರದು. ಆದಷ್ಟು ಬೇಗ ಚಿಕಿತ್ಸೆ ಪಡೆಯಬೇಕು ಎಂದು ಸಚಿವರು ಸೂಚನೆ ನೀಡಿರುವರು.