ಮುಂಬೈ (PTI): 2008ರಲ್ಲಿ ನಡೆದಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸುವುದನ್ನು ಎನ್‌ಐಎ ವಿಶೇಷ ಕೋರ್ಟ್ ಗುರುವಾರ ಪೂರ್ಣಗೊಳಿಸಿದೆ. ಇನ್ನು ಆರೋಪಿಗಳ ಹೇಳಿಕೆಯನ್ನು ದಾಖಲಿಸಬೇಕಾಗಿದೆ.
ಮುಂಬೈ (PTI): 2008ರಲ್ಲಿ ನಡೆದಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸುವುದನ್ನು ಎನ್‌ಐಎ ವಿಶೇಷ ಕೋರ್ಟ್ ಗುರುವಾರ ಪೂರ್ಣಗೊಳಿಸಿದೆ. ಇನ್ನು ಆರೋಪಿಗಳ ಹೇಳಿಕೆಯನ್ನು ದಾಖಲಿಸಬೇಕಾಗಿದೆ.
ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಭಯೋತ್ಪಾದನಾ ನಿಗ್ರಹ ತಡೆ ಕಾಯ್ದೆ ಯುಎಪಿಎ ಅನ್ವಯ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಸೇರಿದಂತೆ ಏಳು ಮಂದಿ ಆರೋಪಿಗಳಾಗಿದ್ದಾರೆ.
ಎನ್‌ಐಎ ಪ್ರತಿನಿಧಿಸಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವಿನಾಶ್ ರಸಲ್, ಅನುಶ್ರೀ ರಸಲ್ ಅವರು ವಿಶೇಷ ನ್ಯಾಯಾಧೀಶ ಎ.ಕೆ.ಲಹೋಟಿ ಅವರ ಎದುರು, 'ಸಾಕ್ಷಿಗಳ ಹೇಳಿಕೆ ದಾಖಲಿಸುವ ಕಾರ್ಯ ಮುಗಿದಿದೆ. ಹೆಚ್ಚಿನ ಸಾಕ್ಷಿಗಳ ವಿಚಾರಣೆ ಬೇಕಿಲ್ಲ' ಎಂದು ಹೇಳಿಕೆ ದಾಖಲಿಸಿದರು.
ಕಳೆದ ಐದು ವರ್ಷಗಳಲ್ಲಿ ಒಟ್ಟು 323 ಮಂದಿ ಸಾಕ್ಷಿಗಳ ವಿಚಾರಣೆ ನಡೆದಿದೆ. ಇನ್ನು ಕೋರ್ಟ್, ಸಿಆರ್‌ಪಿಸಿ ಕಾಯ್ದೆ ಸೆಕ್ಷನ್ 313ರ ಅನ್ವಯ, ಆರೋಪಿಗಳ ಹೇಳಿಕೆಯನ್ನು ದಾಖಲಿಸಲಿದೆ. ಸೆ. 25ರಂದು ಕೋರ್ಟ್‌ನ ಎದುರು ಹಾಜರಿರುವಂತೆ ಆರೋಪಿಗಳಿಗೆ ಸೂಚನೆ ನೀಡಿದೆ.
ಈ ಮಧ್ಯೆ, ಸಾಕ್ಷಿಗಳ ಮರು ವಿಚಾರಣೆ ಕುರಿತಂತೆ ಆರೋಪಿ ಲೆಪ್ಟಿನಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರು ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿತು. 'ಅನಿಶ್ಚಿತ, ಹಾಜರುಪಡಿಸದ ದಾಖಲೆ ಆಧರಿಸಿ ಸಾಕ್ಷಿಗಳ ಮರುವಿಚಾರಣೆ ಸೂಕ್ತವಲ್ಲ' ಎಂದು ಕೋರ್ಟ್ ಹೇಳಿತು.
ಸ್ಫೋಟಕ ಅಳವಡಿಸಿದ್ದ ಬೈಕ್ ಮಾಲೆಗಾಂವ್‌ನ ಮಸೀದಿ ಬಳಿ ಸೆ.29, 2008ರಂದು ಸ್ಫೋಟವಾಗಿತ್ತು. 6 ಮಂದಿ ಸತ್ತಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮಹಾರಾಷ್ಟ್ರದ ಎಟಿಎಸ್ ಮೊದಲು ತನಿಖೆ ನಡೆಸಿದ್ದು, ಬಳಿಕ ಎನ್‌ಐಎಗೆ ತನಿಖೆ ಹಸ್ತಾಂತರಿಸಲಾಗಿತ್ತು.