ಬದಿಯಡ್ಕ : ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ 3ನೇ ಚಾತುರ್ಮಾಸ್ಯ ಸಂದರ್ಭದಲ್ಲಿ ಡಾ. ಪುಂಡೂರು ವೆಂಕಟ್ರಾಜ ಪುಣಿಂಚಿತ್ತಾಯರ ನೆನಪು-2023 ಕಾರ್ಯಕ್ರಮ ನಾಳೆ (ಸೆ.28) ಬೆಳಗ್ಗೆ 9ರಿಂದ ಎಡನೀರು ಮಠದ ಸಭಾಂಗಣದಲ್ಲಿ ನಡೆಯಲಿದೆ.
ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಪುಂಡೂರು ವೆಂಕಟ್ರಾಜ ಪುಣಿಂಚಿತ್ತಾಯರ ಭಾವಚಿತ್ರವನ್ನು ಸಾಹಿತಿ ಬನದಗದ್ದೆ ಪ್ರಭಾಕರ ಕಲ್ಲೂರಾಯ ಅನಾವರಣ ಮಾಡುವರು. ಬೆಳಗ್ಗೆ 10ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಈ ಸಂದರ್ಭದಲ್ಲಿ ಉಡುಪಿಯ ತುಳು ಸಂಶೋಧಕ ಡಾ.ಪದ್ಮನಾಭ ಕೇಕುಣ್ನಾಯರಿಗೆ ‘ಪುವೆಂಪು ಪ್ರಶಸ್ತಿ-2023’ನ್ನು ಪ್ರದಾನ ಮಾಡಲಾಗುವುದು. ನಂತರ ಡಾ.ಪದ್ಮನಾಭ ಕೇಕುಣ್ಣಾಯರಿಂದ ತುಳು ಗ್ರಂಥ ಸಂಪಾದನೆಗೆ ಪುಂಡೂರು ವೆಂಕಟ್ರಾಜ ಪುಣಿಂಚಿತ್ತಾಯರ ಕೊಡುಗೆಯ ಕುರಿತು ಉಪನ್ಯಾಸ ನಡೆಯಲಿದೆ. ಎಡನೀರು ಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಅಧ್ಯಕ್ಷತೆ ವಹಿಸುವರು. ವೈದ್ಯ ಸಾಹಿತಿ ಡಾ.ರಮಾನಂದ ಬನಾರಿ ನುಡಿನಮನ ಸಲ್ಲಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಸ್ ಜಯಾನಂದ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನಿವೃತ್ತ ಮುಖ್ಯಶಿಕ್ಷಕ ಸಿ ಎಚ್ ಗೋಪಾಲ ಭಟ್ ಅವರ 'ಕಾಶಿ ಪ್ರವಾಸ ಯಾತ್ರೆ' ಕೃತಿ ಬಿಡುಗಡೆಯಾಗಲಿದೆ. ಬೆಳಗ್ಗೆ 11ರಿಂದ ಡಾ.ಪುವೆಂಪು ಸಂಪಾದಿತ ತುಳು ಕಾವ್ಯೊ, 'ಶ್ರೀ ಭಾಗವತೋ' ವಾಚನ ನಡೆಯಲಿದೆ. 11.45ರಿಂz ಪೆರ್ಲದ ಸತ್ಯನಾರಾಯಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ರಂಗಡಿಂಡಿಮ ತಂಡದ ಸದಸ್ಯರಿಂದ, ಉದಯ ಸಾರಂಗ ನಿರ್ದೇಶನದಲ್ಲಿ ಡಾ. ಪುವೆಂಪು ವಿರಚಿತ 'ಮಾವು ಹಲಸು' ನಾಟಕ ಪ್ರದರ್ಶನಗೊಳ್ಳಲಿದೆ. ಈ ಸಂದರ್ಭದಲ್ಲಿ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ವಿರಚಿತ ಯಕ್ಷಗಾನ ಪ್ರಸಂಗದ ಆಯ್ದ ಹಾಡುಗಳ ಗಾನವೈಭವ, ಡಾ.ಪುವೆಂಪು ಅಭಿಮಾನಿ ಭಳಗದಿಂದ ಗೀತಗಾಯನ ಕಾರ್ಯಕ್ರಮ ನಡೆಯಲಿದೆ.