ನವದೆಹಲಿ: ಮಹಿಳಾ ಮೀಸಲು ಮಸೂದೆಯಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಇಲ್ಲದಿರುವುದರ ಬಗ್ಗೆ ಕಾಂಗ್ರೆಸ್ ಪ್ರಶ್ನೆಗೆ ತಿರುಗೇಟು ನೀಡಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ದೇಶಕ್ಕೆ ಮೊದಲ ಒಬಿಸಿ ಪ್ರಧಾನಿ ನೀಡಿದ್ದು ಬಿಜೆಪಿ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ 128ನೇ ಸಂವಿಧಾನ ತಿದ್ದುಪಡಿಗೆ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಬೆಂಬಲ ಸೂಚಿಸಬೇಕು ಎಂದು ವಿನಂತಿಸಿದ್ದಾರೆ.
ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆಗೆ ಬುಧವಾರ ಒಪ್ಪಿಗೆ ಸೂಚಿಸಲಾಗಿದೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಬಿಸಿ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಎಂದು ನಡ್ಡಾ ಅವರು ವಾಗ್ದಾಳಿ ನಡೆಸಿದ್ದಾರೆ.
ಅವರು (ಕಾಂಗ್ರೆಸ್) ಒಬಿಸಿಗಳ ಬಗ್ಗೆ ಮಾತನಾಡುತ್ತಾರೆ. ಆದರೆ ದೇಶಕ್ಕೆ ಮೊದಲ ಒಬಿಸಿ ಪ್ರಧಾನಿ ನೀಡಿದ್ದು ಬಿಜೆಪಿ-ಎನ್‌ಡಿಎ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಲೋಕಸಭೆಯಲ್ಲಿ ಬಿಜೆಪಿ ಸಂಸದರಲ್ಲಿ 85 ಮಂದಿ ಒಬಿಸಿ ವಿಭಾಗಕ್ಕೆ ಸೇರಿದವರು. ಅಲ್ಲದೆ ಶೇಕಡಾ 27ರಷ್ಟು ಬಿಜೆಪಿ ಶಾಸಕರು ಮತ್ತು ಶೇ 40ರಷ್ಟು ಎಂಎಲ್‌ಸಿಗಳು ಒಬಿಸಿಗೆ ಸೇರಿದವರು ಎಂದು ಉಲ್ಲೇಖ ಮಾಡಿದ್ದಾರೆ.
ಮಹಿಳೆ ಮೀಸಲು ಮಸೂದೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇಲ್ಲದಿರುವುದರಿಂದ ಅದು ಅಪೂರ್ಣವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಮಹಿಳೆ ಮೀಸಲು ಮಸೂದೆಯಲ್ಲಿ ಒಬಿಸಿ ಮೀಸಲಾತಿಗೆ ಕಾಂಗ್ರೆಸ್ ಬೇಡಿಕೆಯಿರಿಸಿದೆ.