ಕಾಸರಗೋಡು: ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೀಡಿರುವ ಆದೇಶದಿಂದ ನಗರದ ಆಸುಪಾಸಿನ ರಸ್ತೆಗಳಲ್ಲಿ ಉಂಟಾಗಿರುವ ಹೊಂಡಗಳ ದುರಸ್ತಿ ಭಾಗ್ಯ ಕಂಡಿದೆ. ನಗರದ ಪಿಲಿಕುಂಜೆಯಲ್ಲಿ ರಸ್ತೆಯಲ್ಲಿ ಉಂಟಾಗಿದ್ದ ಹೊಂಡಕ್ಕೆ ಸಿಲುಕಿ ಮಂಗಳೂರು ಕಾಲೇಜಿನ ವಿದ್ಯಾರ್ಥಿನಿ ವಾರದ ಹಿಂದೆ ಮೃತಪಟ್ಟ ಘಟನೆಯಿಂದ ಜಿಲ್ಲಾಡಳಿತವೂ ಎಚ್ಚೆತ್ತುಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿ ವಿವಿಧ ರಸ್ತೆಗಳಲ್ಲಿನ ಹೊಂಡಗಳನ್ನು ತಕ್ಷಣ ಮುಚ್ಚುವಂತೆ ನೀಡಿದ ಸೂಚನೆಯನ್ನು ಪರಿಗಣಿಸಿ ಕೆಲವೇ ತಾಸುಗಳೊಳಗಾಗಿ ರಸ್ತೆಹೊಮಡ ಮುಚ್ಚುವ ದುರಸ್ತಿಕಾರ್ಯ ನಡೆಸಲಾಗಿತ್ತು.
ಚೆರ್ಕಳ ಪೇಟೆಯಲ್ಲಿ ಪ್ರಯಾಣಿಕರಿಗೆ ಅಪಾಯ ತಂದೊಡ್ಡುತ್ತಿದ್ದ ಹೊಂಡಗಳ ಜತೆಗೆ ಚೆರ್ಕಳ ಕಲ್ಲಡ್ಕ ರಸ್ತೆಹೊಂಡಗಳನ್ನು ಕೂಡ ಮುಚ್ಚಿ ವಾಹನ ಸಂಚಾರ ಸಉಗಮಗೊಳಿಸಲಾಗಿದೆ. ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‍ಗಳ ನೇತೃತ್ವದಲ್ಲಿ ಮೇಲ್‍ಪರಂಬ ಜಂಕ್ಷನ್ ಬಳಿ ರಿಟಾರಿಂಗ್‍ನಿಂದ ಉಂಟಾಗಿದ್ದ ಹೊಂಡ ಮುಚ್ಚಲಾಗಿದ್ದು, ಚೆರ್ಕಳ-ಕಲ್ಲಡ್ಕ ರಸ್ತೆಯಲ್ಲಿನ ಹೊಂಡ ಮುಚ್ಚುವಂತೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕಳನಾಡು ಜುಮಾ ಮಸೀದಿ ಸನಿಹದ ರಸ್ತೆಯಲ್ಲಿ ಉಂಟಾಗಿದ್ದ ಹೊಂಡ ಮುಚ್ಚುವಂತೆ ಸಂಬಂಧಪಟ್ಟರಿಗೆ ನೋಟಿಸ್ ನೀಡಲಾಗಿದೆ ಎಂದು ಕೆಆರ್ ಎಫ್ ಬಿ ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದರು. ಕಳನಾಡು ಜುಮಾ ಮಸೀದಿ ಬಳಿಯ ರಸ್ತೆ ಗುಂಡಿ ಮುಚ್ಚಿದೆ. ಈ ರಸ್ತೆಯಲ್ಲಿ ಮಣ್ಣು ಹೆಚ್ಚಿರುವ ಭಾಗವನ್ನು ತೆರವುಗೊಳಿಸಿ ಸಂಚಾರಯೋಗ್ಯಗೊಳಿಸಲಾಗಿದೆ. ಜಿಲ್ಲೆಯ ಇತರ ರಸ್ತೆಗಳಲ್ಲಿನ ಹೊಂಡ ತುಂಬುವ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆಯ ತೀವ್ರತೆ ಕಡಿಮೆಯಾದ ನಂತರ ಕಾಸರಗೋಡು-ಕಾಞಂಗಾಡು ರಾಜ್ಯ ಹೆದ್ದಾರಿಯಲ್ಲಿನ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ಲೋಕೋಪಯೋಗಿ (ರಸ್ತೆ ವಿಭಾಗ) ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಕಣ್ತೆರೆಸಿದ ಮಾಧ್ಯಮ:
ರಸ್ತೆ ಗುಂಡಿಗಳ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಗಮನಿಸಿದ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಲೋಕೋಪಯೋಗಿ ರಸ್ತೆ ವಿಭಾಗದ ಕಾರ್ಯಪಾಲಕ ಅಭಿಯಂತರರ ತುರ್ತು ಸಭೆ ಜಿಲ್ಲಾಧಿಕಾರಿಗಳ ಚೇಂಬರ್‍ನಲ್ಲಿ ಆಯೋಜಿಸಿ, ರಸ್ತೆ ಅಪಘಾತದಿಂದ ಉಂಟಾಗುವ ಸಾವು ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಕ್ಷಣಕ್ಕೆ ಕಾಮಗಾರಿ ನಡೆಸಿ ಇದರ ಛಾಯಾಚಿತ್ರ ಒದಗಿಸುವಂತೆಯೂ ಸೂಚನೆ ನಿಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಚಏಂಬರ್‍ನಲ್ಲಿ ತುರ್ತು ಸಭೆಯನ್ನೂ ನಡೆಸಿದ್ದರು. ಕೇರಳ ರಸ್ತೆ ನಿಧಿ ಮಂಡಳಿ ಕಾರ್ಯಪಾಲಕ ಅಭಿಯಂತರ ಪ್ರದೀಪ್ ಕುಮಾರ್, ಸ್ಥಳೀಯಾಡಳಿತ ಇಲಾಖೆ ಕಾರ್ಯಪಾಲಕ ಅಭಿಯಂತರ ವಿ.ಮಿತ್ರ, ಉಪ ಕಾರ್ಯಪಾಲಕ ಅಭಿಯಂತರ ಸುಜಿತ್, ಲೋಕೋಪಯೋಗಿ ರಸ್ತೆ ಇಲಾಖೆಯ ಕುಟಿಯಾನ್ ಹಾಗೂ ಕೆಎಸ್‍ಟಿಪಿ ಸಹಾಯಕ ಎಂಜಿನಿಯರ್ ಸಿ.ಧನ್ಯ ಭಾಗವಹಿಸಿದ್ದರು.