ಚೆನ್ನೈ : ಎಂ.ಎಸ್. ಸ್ವಾಮಿನಾಥನ್ ಮುಂದಾಳತ್ವದಲ್ಲಿ ಆರು ದಶಕಗಳ ಹಿಂದೆ ದೇಶದಲ್ಲಿ ನಡೆದ 'ಹಸಿರು ಕ್ರಾಂತಿ'ಯು ದೇಶವು ಆಹಾರ ಕ್ಷಾಮವನ್ನು ಮೆಟ್ಟಿ ನಿಲ್ಲಲು ನೆರವಾಯಿತು. ಗೋಧಿಯ ಉತ್ಪಾದನೆಯಲ್ಲಿ ದೇಶವು ವಿಶ್ವದ ಮುಂಚೂಣಿ ಸ್ಥಾನಕ್ಕೆ ಬಂದು ನಿಂತಿತು. ದೇಶವು ಬಹುಕಾಲದಿಂದ ಎದುರಿಸುತ್ತಿದ್ದ ಆಹಾರದ ಕೊರತೆಯು 'ಹಸಿರು ಕ್ರಾಂತಿ'ಯ ಕಾರಣದಿಂದಾಗಿ ನಿವಾರಣೆ ಆಯಿತು.
ಸ್ವಾಮಿನಾಥನ್ ಅವರು ಯುವ ವಿಜ್ಞಾನಿಯಾಗಿದ್ದಾಗ ಅಕಾಡೆಮಿಕ್ ವಲಯದಲ್ಲಿ ಹಾಗೂ ಸರ್ಕಾರದಲ್ಲಿ ಆಕರ್ಷಕ ಹುದ್ದೆಗಳ ಪಡೆಯುವ ಅವಕಾಶ ಇತ್ತು. ಆದರೆ ಅವುಗಳನ್ನು ನಿರಾಕರಿಸಿ, ಕೃಷಿ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಗೋಧಿಯ ಮಿಶ್ರ ತಳಿಗಳ ಅಭಿವೃದ್ಧಿಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡರು. ಈ ತಳಿಗಳ ಕಾರಣದಿಂದಾಗಿ 15 ವರ್ಷಗಳ ಅವಧಿಯಲ್ಲಿ ಭಾರತಕ್ಕೆ ಗೋಧಿ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಲು ಸಾಧ್ಯವಾಯಿತು.
ಸ್ವಾಮಿನಾಥನ್ ಅವರಿಗೆ 1952ರಲ್ಲಿ ಅಮೆರಿಕದ ಕೇಂಬ್ರಿಜ್ ವಿಶ್ವವಿದ್ಯಾಲಯವು ಡಾಕ್ಟರೇಟ್ ನೀಡಿತು. ಅಮೆರಿಕದಲ್ಲಿ ಪ್ರೊಫೆಸರ್ ಆಗುವ ಅವಕಾಶ ಅವರಿಗೆ ಇತ್ತು. ಆದರೆ, ಸ್ವತಂತ್ರಗೊಂಡಿದ್ದ ಭಾರತಕ್ಕೆ ಮರಳಿ, 'ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವ' ನಿರ್ಣಯವನ್ನು ಕೈಗೊಂಡರು.
1943ರಲ್ಲಿ ಬಂಗಾಳವು ಕಂಡ ಭೀಕರ ಕ್ಷಾಮದ ಪರಿಣಾಮವಾಗಿ 38 ಲಕ್ಷ ಜನ ಹಸಿವಿನಿಂದ ಸತ್ತಿದ್ದು ಆಗಿನ್ನೂ ನೆನಪಿನಿಂದ ಮಾಸಿರಲಿಲ್ಲ. ಸ್ವಾಮಿನಾಥನ್ ಅವರು ಅಮೆರಿಕದ ಕೃಷಿ ತಜ್ಞ ನಾರ್ಮನ್ ಬೊರ್ಲಾಗ್ ಅವರೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಆರಂಭಿಸಿದರು.
1966ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಸ್ವಾಮಿನಾಥನ್ ಅವರಿಗೆ ತಮ್ಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮುಕ್ತ ಸ್ವಾತಂತ್ರ್ಯ ನೀಡಲಾಗಿತ್ತು. ಆ ಹೊತ್ತಿನಲ್ಲಿ ಭಾರತದ ಅರ್ಥ ವ್ಯವಸ್ಥೆಯು ಆಹಾರದ ಕೊರತೆಯ ಕಾರಣದಿಂದಾಗಿ ತೊಂದರೆಗೆ ಸಿಲುಕಿತ್ತು. ಭಾರತವು ಆಹಾರಕ್ಕಾಗಿ ಬೇರೆ ದೇಶಗಳ ನೆರವನ್ನು ನೆಚ್ಚಿಕೊಂಡಿತ್ತು. ಆದರೆ ಹೊಸ ತಂತ್ರಜ್ಞಾನದ ಕಾರಣದಿಂದಾಗಿ 1970ರ ದಶಕದ ಆರಂಭದಲ್ಲಿ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತು.
'ಬಿಕ್ಕಟ್ಟು ಎಂಬುದು ಹೊಸ ಆವಿಷ್ಕಾರಗಳಿಗೆ ತಾಯಿ ಇದ್ದಂತೆ. ನಾವು 1960ರ ದಶಕದಲ್ಲಿ ಬಿಕ್ಕಟ್ಟು ಎದುರಿಸಿದೆವು, ಅದನ್ನು ನಿವಾರಿಸುವಲ್ಲಿ ಯಶಸ್ಸು ಕಂಡೆವು' ಎಂದು ಅವರು 2008ರಲ್ಲಿ ಎಎಫ್‌ಪಿ ಸುದ್ದಿಸಂಸ್ಥೆ ಪ್ರತಿನಿಧಿ ಬಳಿ ಹೇಳಿದ್ದರು.
1971ರಲ್ಲಿ ಅವರಿಗೆ ಏಷ್ಯಾದ ನೊಬೆಲ್ ಎಂದೇ ಖ್ಯಾತವಾಗಿರುವ 'ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ' ದೊರೆಯಿತು. 20ನೆಯ ಶತಮಾನದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಮಹಾತ್ಮ ಗಾಂಧಿ, ಕವಿ ರವೀಂದ್ರನಾಥ ಟ್ಯಾಗೋರ್ ಅವರ ಜೊತೆ ಸ್ವಾಮಿನಾಥನ್ ಅವರ ಹೆಸರೂ ಇರುತ್ತದೆ ಎಂದು 'ಟೈಮ್' ಪತ್ರಿಕೆಯು ಹೇಳಿದೆ.
ಸ್ವಾಮಿನಾಥನ್ ಅವರು ಕೃಷಿ ಕ್ಷೇತ್ರದಲ್ಲಿ ಮಾರ್ಗದರ್ಶಕನ ಸ್ಥಾನದಲ್ಲಿ ನಿಂತು ಮಾಡಿದ ಕೆಲಸಗಳ ಕಾರಣದಿಂದಾಗಿ ಕೋಟ್ಯಂತರ ಜನರ ಬದುಕು ಬದಲಾಯಿತು, ಭಾರತವು ಆಹಾರ ಭದ್ರತೆಯನ್ನು ಸಾಧಿಸಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೆನಪಿಸಿಕೊಂಡಿದ್ದಾರೆ.
ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮವು ಸ್ವಾಮಿನಾಥನ್ ಅವರು ಹಸಿರು ಕ್ರಾಂತಿಯನ್ನು ಮುನ್ನಡೆಸಿದ ಬಗೆಯನ್ನು ಗಮನಿಸಿ 'ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ' ಎಂದು ಕೊಂಡಾಡಿದೆ. ಅವರಿಗೆ ದೇಶದ ಎರಡನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮ ವಿಭೂಷಣ'ವನ್ನು 1989ರಲ್ಲಿ ಪ್ರದಾನ ಮಾಡಲಾಯಿತು.
ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಭತ್ತದ ತಳಿಗಳ ಅಭಿವೃದ್ಧಿ ಮತ್ತು ಅವುಗಳ ಬಳಕೆಗೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಕ್ಕಾಗಿ 1987ರಲ್ಲಿ ಮೊದಲ 'ವಿಶ್ವ ಆಹಾರ ಪ್ರಶಸ್ತಿ'ಯನ್ನು ಸ್ವಾಮಿನಾಥನ್ ಅವರಿಗೆ ಪ್ರದಾನ ಮಾಡಲಾಯಿತು.
ವಿಶ್ವ ಆಹಾರ ಪ್ರಶಸ್ತಿ ಪ್ರತಿಷ್ಠಾನದ ಪ್ರಕಾರ ದೇಶದ ಗೋಧಿಯ ಉತ್ಪಾದನೆಯು ಕೆಲವೇ ವರ್ಷಗಳಲ್ಲಿ ದುಪ್ಪಟ್ಟಾಗಿತ್ತು. ಹೆಚ್ಚು ಇಳುವರಿ ನೀಡುವ ಭತ್ತ, ಗೋಧಿಯ ತಳಿಗಳನ್ನು ಬೆಳೆಯುವುದಕ್ಕೆ ರೈತರಿಗೆ ತರಬೇತಿ ನೀಡುವಲ್ಲಿ ಕೂಡ ಅವರು ಕೆಲಸ ಮಾಡಿದರು. ಇದರ ಪರಿಣಾಮವಾಗಿ, ಆಹಾರದ ಕೊರತೆ ಎದುರಿಸುತ್ತಿದ್ದ ದೇಶವು ಆಹಾರ ರಫ್ತುದಾರ ಆಗಿ ಪರಿವರ್ತನೆ ಕಂಡಿತು.
ಸ್ವಾಮಿನಾಥನ್ ಅವರು 84 ಗೌರವ ಡಾಕ್ಟರೇಟ್‌ಗಳಿಗೆ ಪಾತ್ರರಾಗಿದ್ದಾರೆ. ವಿವಿಧ ದೇಶಗಳ ವಿಶ್ವವಿದ್ಯಾಲಯಗಳು ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿವೆ. ರಾಯಲ್ ಸೊಸೈಟಿ ಆಫ್ ಲಂಡನ್ ಮತ್ತು ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಸೇರಿದಂತೆ ಹಲವು ವೈಜ್ಞಾನಿಕ ಸಂಸ್ಥೆಗಳ ಫೆಲೊ ಆಗಿದ್ದರು. 2007ರಿಂದ 2013ರವರೆಗೆ ಅವರು ರಾಜ್ಯಸಭಾ ಸದಸ್ಯರಾಗಿಯೂ ಕರ್ತವ್ಯ ನಿಭಾಯಿಸಿದ್ದಾರೆ.
ಸ್ವಾಮಿನಾಥನ್ ಅವರು 1979ರಿಂದ 1980ರ ನಡುವೆ ಕೇಂದ್ರ ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಆಗಿದ್ದರು.
2008ರಲ್ಲಿ ರಾಯಿಟರ್ಸ್ ಸುದ್ದಿಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಸ್ವಾಮಿನಾಥನ್ ಅವರು, ವಿಶ್ವಕ್ಕೆ ಭಾರತವು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಒದಗಿಸುವಂತೆ ಆಗುವಲ್ಲಿ ಸಂರಕ್ಷಣಾ ಕೃಷಿ ಮತ್ತು ಹಸಿರು ತಂತ್ರಜ್ಞಾನ ಬಹಳ ಮಹತ್ವದ್ದು ಎಂದು ಹೇಳಿದ್ದರು. 'ಹಸಿರು ಕ್ರಾಂತಿಯು ನಮ್ಮಲ್ಲಿ ಸಾಧನೆಯ ಭಾವವೊಂದನ್ನು ತಂದಿತು. ಉತ್ಪಾದನೆಯ ಸಮಸ್ಯೆಯನ್ನು ನಾವು ಬಗೆಹರಿಸಿದೆವು ಎಂಬ ಭಾವ ಅದು. ಈಗ ಉತ್ಪಾದನೆ ಹಾಗೂ ಉತ್ಪಾದಕತೆಯಲ್ಲಿ ಸ್ಥಿರವಾದ ಮಟ್ಟವನ್ನು ತಲುಪಿದ್ದೇವೆ. ಈಗ ಗ್ರಾಮೀಣ ಮೂಲಸೌಕರ್ಯದಲ್ಲಿ ಅಗತ್ಯ ಪ್ರಮಾಣದಲ್ಲಿ ಹೂಡಿಕೆ ಇಲ್ಲದ ಸಮಸ್ಯೆ ಇದೆ' ಎಂದು ಅವರು ನಂತರ ಹೇಳಿದ್ದರು.
ಬರಗಾಲ ಕಂಡು ಕೃಷಿ ವಿಜ್ಞಾನಿಯಾದರು
ಚೆನ್ನೈ: ಎಂ.ಎಸ್. ಸ್ವಾಮಿನಾಥನ್ ಅವರು ತಮ್ಮ ತಂದೆಯಂತೆಯೇ ವೈದ್ಯನಾಗುವ ಹಂಬಲ ಹೊತ್ತಿದ್ದರು. ಆದರೆ 1943ರಲ್ಲಿ ಬಂಗಾಳ ಕಂಡ ಕ್ಷಾಮವು ಅವರು ತಮ್ಮ ಮನಸ್ಸು ಬದಲಿಸುವಂತೆ ಮಾಡಿತು. ಈ ಕ್ಷಾಮದಿಂದಾಗಿ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದನ್ನು ಕಂಡು ಸ್ವಾಮಿನಾಥನ್ ಕೃಷಿ ಸಂಶೋಧನೆಯತ್ತ ಮುಖ ಮಾಡಿದರು. ಕೊಯಮತ್ತೂರು ಕೃಷಿ ಕಾಲೇಜು ಸೇರಿದರು (ಈಗಿನ ಹೆಸರು ತಮಿಳುನಾಡು ಕೃಷಿ ವಿಶ್ವವಿದ್ಯಾಲಯ). ಅವರು ತಮಗೆ ಪ್ರಶಸ್ತಿಯ ರೂಪದಲ್ಲಿ ಬಂದ ಹಣವನ್ನು ಸಾರ್ವಜನಿಕ ಒಳಿತಿಗಾಗಿ ಖರ್ಚು ಮಾಡುತ್ತಿದ್ದರು. 'ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ'ವನ್ನು ಅವರು 1987ರಲ್ಲಿ ತಮ್ಮನ್ನು ಅರಸಿ ಬಂದ ವಿಶ್ವ ಆಹಾರ ಪ್ರಶಸ್ತಿಯಿಂದ ದೊರೆತ ಹಣ ಬಳಸಿ ಸ್ಥಾಪಿಸಿದರು.
ಸ್ವಾಮಿನಾಥನ್ ನಿಧನ
ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ (98) ಗುರುವಾರ ಇಲ್ಲಿನ ತಮ್ಮ ನಿವಾಸದಲ್ಲಿ ಬೆಳಿಗ್ಗೆ 11.15ಕ್ಕೆ ನಿಧನರಾದರು. ಅವರಿಗೆ ಮೂವರು ಪುತ್ರಿಯರು ಇದ್ದಾರೆ. ಪುತ್ರಿಯರ ಪೈಕಿ ಒಬ್ಬರಾದ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕೃಷಿ ಲೋಕದಲ್ಲಿ ಅನುಕರಣೀಯ ವ್ಯಕ್ತಿಯಾಗಿ ಬೆಳೆದಿದ್ದ ಸ್ವಾಮಿನಾಥನ್ ಅವರು ಕೆಲವು ಕಾಲದಿಂದ ವಯೋಸಹಜ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸ್ವಾಮಿನಾಥನ್ ಅವರ ಅಂತ್ಯಸಂಸ್ಕಾರವು ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ಮೂಲಗಳ ಪ್ರಕಾರ ಶನಿವಾರ ಅವರ ಅಂತ್ಯಸಂಸ್ಕಾರ ನಡೆಯಲಿದೆ.