ನವದೆಹಲಿ/ಇಂಫಾಲ್ : ಇಂಫಾಲ್ ಕಣಿವೆಯಲ್ಲಿ ಉಗ್ರರು ಮುಕ್ತವಾಗಿ ಸಂಚರಿಸುತ್ತಿರುವುದು ಹಾಗೂ ಉದ್ರಿಕ್ತ ಗುಂಪುಗಳನ್ನು ಇನ್ನಷ್ಟು ಪ್ರಚೋದಿಸುತ್ತಿರುವುದು ಕಂಡುಬಂದಿದೆ.
ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ಬುಧವಾರ ಸಂಜೆ ಪೊಲೀಸರ ಮೇಲೆ ನಡೆದಿರುವ ದಾಳಿಯ ಸಂದರ್ಭದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಕಪ್ಪು ಬಣ್ಣದ ಸಮವಸ್ತ್ರ ಧರಿಸಿ, ಉದ್ರಿಕ್ತ ಯುವಕರಿಗೆ ಪೊಲೀಸರ ಮೇಲೆ ದಾಳಿ ನಡೆಸುವಂತೆ ಸೂಚನೆ ನೀಡುತ್ತಿದ್ದರು.
ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ (ಯುಎನ್‌ಎಲ್‌ಎಫ್), ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಮತ್ತು ಇತರ ನಿಷೇಧಿತ ಗುಂಪುಗಳಿಗೆ ಸೇರಿದ ಉಗ್ರರು ಉದ್ರಿಕ್ತ ಜನರ ಗುಂಪಿನಲ್ಲಿ ಸೇರಿಕೊಂಡಿದ್ದಾರೆ. ಅವರು ಭದ್ರತಾ ಪಡೆಗಳ ಮೇಲೆ ಹಠಾತ್ ದಾಳಿಗಳನ್ನು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಉದ್ರಿಕ್ತರಿಗೆ ಸೂಚನೆಗಳನ್ನು ಕೂಡ ನೀಡುತ್ತಿದ್ದಾರೆ ಎಂದು ಭದ್ರತಾ ಸಂಸ್ಥೆಗಳು ಹೇಳಿವೆ.
ತೆಂಗನೋಉಪಲ್ ಜಿಲ್ಲೆಯಲ್ಲಿ ಈಚೆಗೆ ಉದ್ರಿಕ್ತ ಗುಂಪೊಂದು ನಡೆಸಿದ ದಾಳಿನಲ್ಲಿ ಸೇನೆಯ ಲೆಫ್ತಿನೆಂಟ್ ಕರ್ನಲ್ ಒಬ್ಬರು ಗಾಯಗೊಂಡಿದ್ದರು. ಆ ದಾಳಿ ನಡೆಸಿದ ಗುಂಪಿನಲ್ಲಿ ಉಗ್ರರು ಇದ್ದುದು ಪತ್ತೆಯಾಗಿದೆ. ಪ್ರತಿಭಟನೆಯಲ್ಲಿ ತೊಡಗಿರುವ ಜನಸಾಮಾನ್ಯರ ನಡುವೆ ಉಗ್ರರು ಸೇರಿಕೊಂಡು ಅಶಾಂತಿ ಸೃಷ್ಟಿಸಲು ಯತ್ನಿಸುವ ಸಾಧ್ಯತೆ ಇದೆ ಎಂದು ಭದ್ರತಾ ಸಂಸ್ಥೆಗಳು ಈಚೆಗೆ ಎಚ್ಚರಿಸಿದ್ದವು.
ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ, ಜನರ ಗುಂಪಿಗೆ ಉಗ್ರರು ಸೂಚನೆ ನೀಡುತ್ತಿದ್ದರು. ಇದಲ್ಲದೆ, ಗುಂಪಿನಲ್ಲಿ ಇದ್ದ ದುಷ್ಕರ್ಮಿಗಳು ಕಬ್ಬಿಣದ ತುಂಡುಗಳನ್ನು ಸ್ವಯಂಚಾಲಿತ ಕವಣೆ ಬಳಸಿ ಭದ್ರತಾ ಪಡೆಗಳತ್ತ ಎಸೆಯುತ್ತಿದ್ದರು.
ಬಹುತೇಕ ನಿಷ್ಕ್ರಿಯಗೊಂಡಿದ್ದ ಯುಎನ್‌ಎಲ್‌ಎಫ್, ಪಿಎಲ್‌ಎ, ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೈಪಾಕ್ ಸೇರಿದಂತೆ ಹಲವು ನಿಷೇಧಿತ ಗುಂಪುಗಳು ಈಗ ನಡೆಯುತ್ತಿರುವ ಸಂಘರ್ಷದ ಸಂದರ್ಭದಲ್ಲಿ ಮತ್ತೆ ಸಕ್ರಿಯವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯುಎನ್‌ಎಲ್‌ಎಫ್‌ನಲ್ಲಿ 330 ಮಂದಿ, ಪಿಎಲ್‌ಎ ಬಳಿ 300 ಜನರ ತಂಡ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.