ಕುಂಬಳೆ: ಸನಾತನ ಹಿಂದೂ ಧರ್ಮವೆಂದರೆ ಮಲೇರಿಯಾ, ಡೆಂಗ್ಯೂ, ಕೊರೋನಾ ವೈರಸ್ ಇದ್ದಂತೆ. ಅ ಧರ್ಮವನ್ನು ಬೇರುಸಮೇತ ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಸಚಿವ ಉದಯನಿ ಸ್ಟಾಲಿನ್ ಹೇಳಿಕೆಯನ್ನು ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಸನಾತನ ಧರ್ಮದ ಅಂತರಾಳವನ್ನು ತಿಳಿಯದೆ ಇಂತಹ ನಾಯಕರು ದೇಶದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಸನಾತನ ಧರ್ಮವೇ ಭಾರತದ ವೈಶಿಷ್ಟ್ಯವಾಗಿದೆ. ಹೊರರಾಜ್ಯದ ಜನರೂ ನಮ್ಮ ಧರ್ಮವನ್ನು ಗೌರವಿಸುತ್ತಿರುವ ಕಾಲದಲ್ಲಿ ಓರ್ವ ಜನಪ್ರತಿನಿಧಿಯಾಗಿ ಕೀಳುಮಟ್ಟದ ಹೇಳಿಕೆಯನ್ನು ನೀಡುತ್ತಿರುವುದು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತದೆ. ಇದರ ವಿರುದ್ಧ ತೀವ್ರವಾದ ಕಠಿಣ ಕ್ರಮಕೈಗೊಳ್ಳಬೇಕೆಂದು ವಿಹಿಂಪ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.