ನವದೆಹಲಿ: 'ಭಾರತೀಯ ಸೇನೆಯ ಚಿನಾರ್ ಕೋರ್ ನೇತೃತ್ವದಲ್ಲಿ ಒಂದು ವರ್ಷ ಕಾಲ ಸಂಘಟಿತ ಪ್ರಚಾರ ಹಾಗೂ ತಪ್ಪು ಮಾಹಿತಿ ಪ್ರಸಾರ ಕಾರ್ಯ ನಡೆಸಿದ್ದವರ ವಿರುದ್ಧ ಕೈಗೊಳ್ಳುವುದನ್ನು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಭಾರತದ ತಂಡ ವಿಳಂಬ ಮಾಡಿತ್ತು' ಎಂದು ವಾಷಿಂಗ್ಟನ್ ಪೋಸ್ಟ್ ಬುಧವಾರ ಪ್ರಕಟಿಸಿದ ವರದಿಯಲ್ಲಿ ಹೇಳಲಾಗಿದೆ.
ನಕಲಿ ಪ್ರೊಫೈಲ್‌ಗಳನ್ನು ಹಾಗೂ ಖಾತೆಗಳನ್ನು ಸೃಷ್ಟಿಸಿ, ಸಾಮಾಜಿಕ ಮಾಧ್ಯಮಗಳ ಮೂಲಕ ವಿಶ್ವದೆಲ್ಲೆಡೆ ಸುಳ್ಳು ಸಂದೇಶಗಳನ್ನು ಪ್ರಚಾರ ಮಾಡುವ ಕುರಿತು ಎಚ್ಚರಿಸುವ ಕಾರ್ಯವನ್ನು ಮೆಟಾದ ಸಿಐಬಿ (ಕೋ ಆರ್ಡಿನೇಟೆಡ್ ಇನ್‌ಆಥೆಂಟಿಕ್ ಬಿಹೇವಿಯರ್) ತಂಡ ಮಾಡುತ್ತದೆ. ಈ ತಂಡದ ವರದಿಯಲ್ಲಿನ ಅಂಶಗಳನ್ನು ಉಲ್ಲೇಖಿಸಿ, ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಆದರೆ, ಭಾರತೀಯ ಸೇನೆಯ ಚಿನಾರ್ ಕೋರ್ ಜಾಲವು ಯಾವ ರೀತಿಯ ಪೋಸ್ಟ್‌ಗಳನ್ನು ಮಾಡುತ್ತಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಈ ಜಾಲವು ಪ್ರಚಾರ ಮಾಡಿದ ತಪ್ಪು ಮಾಹಿತಿಯು ಜಮ್ಮು-ಕಾಶ್ಮೀರದ ಪತ್ರಕರ್ತರನ್ನು ಅಪಾಯಕ್ಕೆ ಸಿಲುಕಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
'ಸೇನೆಯ ಅಧಿಕಾರಿಗಳು ಟ್ವಿಟರ್ (ಈಗ ಎಕ್ಸ್) ಹಾಗೂ ಫೇಸ್‌ಬುಕ್ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದರು. ತಪ್ಪು ಮಾಹಿತಿ ಪ್ರಚುರಪಡಿಸುವ ಪಾಕಿಸ್ತಾನ ಮೂಲದ ಜಾಲತಾಣಗಳ ವಿರುದ್ಧವಾಗಿ ನಡೆಸಿದ ಕಾರ್ಯಾಚರಣೆ ಇದಾಗಿತ್ತು ಎಂದು ಸಮರ್ಥಿಸಿಕೊಂಡಿದ್ದರು' ಎಂದೂ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.