ಚಂಡೀಗಢ (PTI): 'ಜೈ ಹಿಂದ್ ಪಪ್ಪಾ'...
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ವೀರಮರಣವನ್ನಪ್ಪಿದ ಭಾರತೀಯ ಸೇನೆಯ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರಿಗೆ ಶುಕ್ರವಾರ ಅವರ ಆರು ವರ್ಷದ ಪುತ್ರ ಕಬೀರ್ ಕೊನೆಯ ಬಾರಿಗೆ ಸಲ್ಯೂಟ್ ಹೊಡೆದು ಅಂತಿಮ ನಮನ ಸಲ್ಲಿಸಿದ್ದು ಹೀಗೆ.
ಬುಧವಾರ ಸಾವಿಗೀಡಾಗಿದ್ದ ಮನ್‌ಪ್ರೀತ್ ಸಿಂಗ್ ಅವರ ಪಾರ್ಥಿವ ಶರೀರವಿದ್ದ ಪೆಟ್ಟಿಗೆಯನ್ನು ಅವರ ಸ್ವಗ್ರಾಮ ಪಂಜಾಬ್‌ನ ಭರುನ್‌ಜಿಯಾನ್ ಗ್ರಾಮಕ್ಕೆ ತರಲಾಗಿತ್ತು. ಈ ವೇಳೆ ಸೇನಾ ಉಡುಪು ಧರಿಸಿದ್ದ ಸಿಂಗ್ ಅವರ ಪುತ್ರ ಕಬೀರ್ ಪ್ರೀತಿಯ ಅಪ್ಪನಿಗೆ ಕೊನೆಯ ಬಾರಿಗೆ ಸಲ್ಯೂಟ್ ಹೊಡೆದು, 'ಜೈ ಹಿಂದ್ ಪಪಾ...' ಎಂದು ಉದ್ಗರಿಸಿದಾಗ ನೆರೆದವರ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು.
ಕಬೀರ್ ಸಲ್ಯೂಟ್ ಮಾಡುವಾಗ ಸೇನಾಧಿಕಾರಿಯೊಬ್ಬರು ಆತನನ್ನು ಹಿಡಿದುಕೊಂಡಿದ್ದರು. ಇನ್ನೊಬ್ಬ ಸಂಬಂಧಿ ಕರ್ನಲ್ ಅವರ ಎರಡು ವರ್ಷದ ಪುತ್ರಿ ಬನ್ನಿಯನ್ನು ಹಿಡಿದುಕೊಂಡಿದ್ದರು.
ಶುಕ್ರವಾರ ಮುಂಜಾನೆಯಿಂದಲೇ ಭರುನ್‌ಜಿಯಾನ್ ಗ್ರಾಮದಲ್ಲಿರುವ ಕರ್ನಲ್ ಅವರ ಮನೆ ಮುಂದೆ ನಡೆದ ಅಂತಿಮ ಯಾತ್ರೆಯಲ್ಲಿ ಮನ್‌ಪ್ರೀತ್ ಅವರ ಪತ್ನಿ ಜಗ್‌ಮೀತ್ ಕೌರ್, ಕುಟುಂಬ ಸದಸ್ಯರು, ಸಂಬಂಧಿಕರು ಸೇರಿದಂತೆ ನೂರಾರು ಜನರು ಪಾಲ್ಗೊಂಡರು. ಕರ್ನಲ್ ಅವರಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸೇನಾ ಗೌರವ ಸಲ್ಲಿಸಿ ಅಂತ್ಯಕ್ರಿಯೆ ನಡೆಸಲಾಯಿತು.
ಈ ವೇಳೆ ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಸೇನೆಯ ಮಾಜಿ ಮುಖ್ಯಸ್ಥ ವಿ.ಪಿ. ಮಲ್ಲಿಕ್, ಸಚಿವರಾದ ಚೇತನ್ ಸಿಂಗ್ ಜೌರಾಮರಾಜ್, ಅನ್‌ಮೋಲ್ ಗಗನ್ ಮಾನ್, ಸೇನೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಿಂಗ್ ಅವರ ಶಾಲಾ ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ತಂದೆಯೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, 9 ವರ್ಷಗಳ ಹಿಂದೆ ನಿಧನರಾಗಿದ್ದಾರೆ.
2003ರಲ್ಲಿ ಮನ್‌ಪ್ರೀತ್ ಸಿಂಗ್ ಅವರು ಸೇನೆಗೆ ಸೇರಿದ್ದರು. ಅವರ ಪತ್ನಿ ಜಗಮೀತ್ ಕೌರ್ ಅವರು ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದಾರೆ. ಕರ್ನಲ್ ಅವರಿಗೆ ತಾಯಿ ಮನ್‌ಜೀತ್ ಕೌರ್, ಸಹೋದರ ಸಂದೀಪ್ ಸಿಂಗ್ ಇದ್ದಾರೆ.
ಕರ್ನಲ್ ಮನ್‌ಪ್ರೀತ್ ಸಿಂಗ್