ವಾಷಿಂಗ್ಟನ್: ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಹಿಂಸಾಚಾರ ಮತ್ತು ಬೆದರಿಕೆಯ ವಾತಾವರಣ ಕಂಡುಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಅಮೆರಿಕದ ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಕ್ ಸ್ವಾತಂತ್ರ್ಯ ಇದೆ ಎಂದು ರಾಜತಾಂತ್ರಿಕರಿಗೆ ಬೆದರಿಕೆ ಹಾಕುವುದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಉದ್ವಿಗ್ನಗೊಂಡಿದೆ. ಕೆನಡಾದಲ್ಲಿರುವ ಸಿಖ್ ಪ್ರತ್ಯೇಕತಾವಾದಿಗಳ ಉಪಸ್ಥಿತಿಯೂ ಖಾಲಿಸ್ತಾನ ಚಳುವಳಿಯನ್ನು ಜೀವಂತವಾಗಿಟ್ಟಿದೆ ಹಾಗೂ ಭಾರತದಿಂದ ಸ್ವತಂತ್ರ ಸಿಖ್ ರಾಜ್ಯವನ್ನು ಬೇರ್ಪಡಿಸುವ ಬೇಡಿಕೆಯಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಖಾಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ (ಭಾರತೀಯ ಏಜೆಂಟ್‌ಗಳ) ಪಾತ್ರವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಭಾರತ ಸರ್ಕಾರ ಈ ಆರೋಪವನ್ನು ಅಸಂಬದ್ಧ ಎಂದು ತಳ್ಳಿಹಾಕಿತ್ತು. ಹತ್ಯೆಗೆ ಸಂಬಂಧಿಸಿದ ತನಿಖೆಯಲ್ಲಿ ಕೆನಡಾದೊಂದಿಗೆ ಸಹಕರಿಸುವಂತೆ ವಾಷಿಂಗ್ಟನ್ ಭಾರತವನ್ನು ಒತ್ತಾಯಿಸಿದೆ.