ಕಾಸರಗೋಡು: ರಬ್ಬರ್ ಕೃಷಿಕರಿಗಾಗಿ ಕೇರಳ ಸರ್ಕಾರ ಜಾರಿಗೆ ತಂದಿರುವ ರಬ್ಬರ್ ಪ್ರೊಡಕ್ಷನ್ ಇನ್ಸೆಂಟಿವ್ ಸ್ಕೀಂಗೆ ನೋಂದಾವಣೆ ನಡೆಸುವಂತೆ ರಬ್ಬರ್ ಬೋರ್ಡ್ ಪ್ರಕಟಣೆ ತಿಳಿಸಿದೆ. ರಬ್ಬರ್ ಕೃಷಿಗೆ ನ್ಯಾಯ ಬೆಲೆ ಒದಗಿಸಿಕೊಡುವ ನಿಟ್ಟಿನಲ್ಲಿ ಕೇರಳ ಸರ್ಕಾರ 2015ರಲ್ಲಿ ಈ ಯೋಜನೆ ಜಾರಿಗೊಳಿಸಿದ್ದು, ಎಂಟನೇ ಹಂತದ ಯೋಜನೆ 2023 ಜೂನ್ ವೇಳೆಗೆ ಅಂತ್ಯಗೊಂಡಿತ್ತು. ಒಂಬತ್ತನೇ ಹಂತದ ಸ್ಕೀಂನ ಪ್ರಯೋಜನ ರಬ್ಬರ್ ಕೃಷಿಕರಿಗೆ ಲಭ್ಯವಾಗಿಸುವ ನಿಟ್ಟಿನಲ್ಲಿ 2023 ಜುಲೈ ಒಂದರಿಂದ ನೋಂದಾವಣೆ ಆರಂಭಗೊಂಡಿದ್ದು, ಹೆಸರು ನೋಂದಾಯಿಸಲು ಬಾಕಿಯಿರುವವರು ರಬ್ಬರ್ ಬೋರ್ಡ್ ಅಧೀನದಲ್ಲಿರುವ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಏನಿದು ಸ್ಕೀಂ:
2010ಕ್ಕೂ ಮೊದಲು ರಬ್ಬರ್ ಧಾರಣೆ ಪ್ರತಿ ಕಿಲೋಗೆ 250ರೂ. ವರೆಗೂ ತಲುಪಿದ್ದರೆ, ನಂತರದ ದಿವಸಗಳಲ್ಲಿ ಬೆಲೆ ಕುಸಿಯುತ್ತಾ ಬರಲಾರಂಭಿಸಿತ್ತು. ಇದರಿಂದ ರಬ್ಬರ್ ಕೃಷಿಕರು ಹೆಚ್ಚಿನ ಸಂಕಷ್ಟ ಎದುರಿಸಬೇಕಾಗಿ ಬಂದಿದ್ದು, ಕೇರಳ ಸರ್ಕಾರ 2015ರಲ್ಲಿ ರಬ್ಬರ್ ಪ್ರೊಡಕ್ಷನ್ ಇನ್ಸೆಂಟಿವ್ ಸ್ಕೀಂ ಆರಂಭಿಸಿತ್ತು. ಯೋಜನೆಯನ್ವಯ ರಬ್ಬರ್‍ಗೆ ನಿಗದಿತ ಬೆಲೆಗಿಂತ ಧಾರಣೆ ಕುಸಿತ ಕಂಡುಬಂದಲ್ಲಿ ಈ ಮೊತ್ತವನ್ನು ನಿಗದಿತ ಬೆಲೆಗೆ ಹೊಂದಿಸಿ ಉಳಿದ ಮೊತ್ತವನ್ನು ಸರ್ಕಾರ ಕೃಷಿಕರಿಗೆ ನೀಡುತ್ತದೆ. ಒಂದು ಕಿಲೋ ರಬ್ಬರ್ 170 ರೂ. ಗೆ ಖರೀದಿಯಾಗಿ, ಇದು ಏಕಾಏಕಿ 130ರ ಅಂಚಿಗೆ ತಲುಪಿದಲ್ಲಿ ಯೋಜನೆಯನ್ವಯ ಬಾಕಿ ಮೊತ್ತ 40ರೂ. ಸೇರಿಸಿ 170ರೂ.ಗೆ ಹೊಂದಿಸಿ ಕೃಷಿಕರಿಗೆ ನೀಡುವ ಯೋಜನೆ ಇದಾಗಿದೆ.