ಹೈದರಾಬಾದ್(PTI): ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪುನರ್ ರಚನೆಗೊಂಡಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಮೊದಲ ಸಭೆ ಹೈದರಾಬಾದ್‌ನಲ್ಲಿ ಶನಿವಾರ ಆರಂಭವಾಗಲಿದೆ.
ಐದು ರಾಜ್ಯಗಳ ವಿಧಾನಸಭೆಗಳು ಹಾಗೂ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಳ ಕುರಿತು ರೂಪಿಸಬೇಕಾದ ಕಾರ್ಯತಂತ್ರದ ಕುರಿತು ಪಕ್ಷದ ವರಿಷ್ಠರು ಈ ಸಭೆಯಲ್ಲಿ ಚರ್ಚಿಸುವರು ಎಂದು ಮೂಲಗಳು ಹೇಳಿವೆ.
ಭಾರತ ಜೋಡೊ ಯಾತ್ರೆಯ ಯಶಸ್ಸಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕಾಂಗ್ರೆಸ್, ಈಗ ಎರಡನೇ ಹಂತದ ಯಾತ್ರೆಗೆ ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆಯೂ ಎರಡು ದಿನಗಳ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಇವೇ ಮೂಲಗಳು ಹೇಳಿವೆ.
ತೆಲಂಗಾಣ ವಿಧಾನಸಭೆಗೂ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿರುವ ಸಿಡಬ್ಲ್ಯುಸಿ ಸಭೆಗೆ ಮಹತ್ವ ಬಂದಿದ್ದು, ಪಕ್ಷದ ಪ್ರಚಾರ ಕಾರ್ಯಕ್ಕೆ ಶಕ್ತಿ ತುಂಬುವ ಉದ್ದೇಶವನ್ನೂ ಪಕ್ಷ ಹೊಂದಿದೆ.
ಪಕ್ಷದ ನಡೆ ಕುರಿತು ನಿರ್ಣಯ ಕೈಗೊಳ್ಳುವ, 39 ಸದಸ್ಯ ಬಲದ ಸಮಿತಿಯ ಮೊದಲ ದಿನದ ಸಭೆ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಶನಿವಾರ ನಡೆಯಲಿದ್ದರೆ, ಭಾನುವಾರ ನಡೆಯಲಿರುವ ಸಭೆಯಲ್ಲಿ ಸಿಡಬ್ಲ್ಯುಸಿ ಸದಸ್ಯರ ಜೊತೆಗೆ ಪಕ್ಷದ ಎಲ್ಲ ರಾಜ್ಯ ಘಟಕಗಳ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧದ ಹೋರಾಟದ ರೂಪುರೇಷೆ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಭೋಪಾಲ್‌ನಲ್ಲಿ ಮುಂದಿನ ತಿಂಗಳು ಹಮ್ಮಿಕೊಳ್ಳಲು ಉದ್ಧೇಶಿಸಿರುವ 'ಇಂಡಿಯಾ'ದ ಮೊದಲ ಜಂಟಿ ಸಾರ್ವಜನಿಕ ಸಭೆ, ದೇಶದಲ್ಲಿನ ನಿರುದ್ಯೋಗ ಸಮಸ್ಯೆ, ಹಣದುಬ್ಬರ, ಅದಾನಿ ಸಮೂಹದ ವಿರುದ್ಧದ ಆರೋಪಗಳು, ತೆಲಂಗಾಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರದಂತಹ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಸೆ.17ರಂದು 'ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನಾಚರಣೆ' ಅಂಗವಾಗಿ ಪಕ್ಷವು ಬೃಹತ್ ರ‍್ಯಾಲಿ ಹಮ್ಮಿಕೊಂಡಿದೆ. ರ‍್ಯಾಲಿ ಸಂದರ್ಭದಲ್ಲಿಯೇ ಐದು ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ಚುನಾವಣೆಗೆ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಮುಂದಾಗಿದೆ.
ಸಚಿನ್ ಪೈಲಟ್- ಹೈದರಾಬಾದ್ ಸಭೆ ನಿರ್ಣಾಯಕ: ಪೈಲಟ್ ನವದೆಹಲಿ(ಪಿಟಿಐ): ಪುನರ್ ರಚಿತ ಸಿಡಬ್ಲ್ಯುಸಿ ಸಮತೋಲನದಿಂದ ಕೂಡಿದೆ. ಅನುಭವಿ ನಾಯಕರ ಜೊತೆ ಯುವ ಮುಖಗಳಿಗೂ ಸಮಿತಿಯಲ್ಲಿ ಸ್ಥಾನ ಕಲ್ಪಿಸಿರುವುದು ಸ್ವಾಗತಾರ್ಹ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಶುಕ್ರವಾರ ಹೇಳಿದ್ದಾರೆ. ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆಗಳು ನಡೆಯಲಿರುವ ಕಾರಣ ಹೈದರಾಬಾದ್‌ನಲ್ಲಿ ನಡೆಯಲಿರುವ ಸಮಿತಿ ಸಭೆ ನಿರ್ಣಾಯಕವಾಗಲಿದೆ ಎಂದು ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಕಳೆದ ತಿಂಗಳು ಪುನರ್‌ರಚನೆಗೊಂಡಿರುವ ಸಿಡಬ್ಲ್ಯುಸಿಯಲ್ಲಿ ಪೈಲಟ್ ಅವರಿಗೂ ಸ್ಥಾನ ಕಲ್ಪಿಸಲಾಗಿದೆ. ''ಇಂಡಿಯಾ'ದಲ್ಲಿಯೇ ಕಾಂಗ್ರೆಸ್ ದೊಡ್ಡ ಪಕ್ಷವಾಗಿದ್ದು ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಬೇಕು. ಆದರೆ ಮೈತ್ರಿಕೂಟದಲ್ಲಿ ಎಲ್ಲ ಅಂಗಪಕ್ಷಗಳಿಗೆ ಸಮಾನ ಗೌರವ ನೀಡಲಾಗಿದೆ' ಎಂದಿದ್ದಾರೆ.