ನವದೆಹಲಿ :ಪಿಎಂ-ಪೋಷಣ್ ಯೋಜನೆಯ ಅನುದಾನವನ್ನುಮುಂದುವರಿಸಲು ನಿಯಮಗಳನ್ನು ಪಾಲಿಸಬೇಕು ಎಂದು ಕೇರಳ ಸರಕಾರಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು thehindu.com ವರದಿ ಮಾಡಿದೆ.
ಶಿಕ್ಷಣ ಸಚಿವಾಲಯ ಪ್ರಾಯೋಜಿತ ಪಿಎಂ-ಪೋಷಣ್ ಯೋಜನೆಯಡಿಯ ಮಧ್ಯಾಹ್ನದ ಊಟ ಕಾರ್ಯಕ್ರಮಕ್ಕೆ ಅನುದಾನ ಒದಗಿಸುವಂತೆ ಆಗ್ರಹಿಸಿದ್ದ ಕೇರಳ ಸರ್ಕಾರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಈವರೆಗೆ ತಾನು ರಾಜ್ಯಕ್ಕೆ ರೂ. 132.90 ಕೋಟಿಯನ್ನು ವರ್ಗಾಯಿಸಿರುವುದಾಗಿ ಹೇಳಿದೆ. ಇದಲ್ಲದೆ, ತನ್ನ ಅನುದಾನವನ್ನು ರಾಜ್ಯದ ಖಜಾನೆಯಿಂದ ರಾಜ್ಯ ನೋಡಲ್ ಖಾತೆಗೆ ಅದಕ್ಕೆ ಸರಿಸಮನಾದ ಮೊತ್ತವಾದ ರೂ.76.78 ಕೋಟಿಯೊಂದಿಗೆ ವರ್ಗಾಯಿಸಬೇಕು ಎಂದೂ ಶಿಕ್ಷಣ ಸಚಿವಾಲಯ ಸೂಚನೆ ನೀಡಿದೆ.
"ಆದರೆ, ಕೇರಳ ರಾಜ್ಯವು ಈ ವರ್ಗಾವಣೆಯನ್ನುಪೂರೈಸದೆ ಇರುವುದರಿಂದ, ತಾನಾಗಿ ಮುಂದಿನ ಅನುದಾನ ವರ್ಗಾವಣೆ ಪಡೆಯಲು ಅನರ್ಹಗೊಂಡಿದೆ" ಎಂದು ಶಿಕ್ಷಣ ಸಚಿವಾಲಯದ ಪ್ರಕಟಣೆಯಲ್ಲಿ ಹೇಳಲಾಗಿದೆ.
ಸೆಪ್ಟೆಂಬರ್ 8ರಂದು ಈ ವಿಷಯವನ್ನು ಈಮೇಲ್ ಮೂಲಕ ಕೇರಳ ಸರ್ಕಾರಕ್ಕೆ ತಿಳಿಸಿರುವ ಶಿಕ್ಷಣ ಸಚಿವಾಲಯವು, ಈ ವಿಷಯವನ್ನು ಖುದ್ದು ಹಾಜರಿಯ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದೆ.
2021-22ನೇ ಸಾಲಿನ ಬಾಕಿಯಾದ ರೂ.132.90 ಕೋಟಿ ಸೇರಿದಂತೆ 2022-23ನೇ ಆರ್ಥಿಕ ಸಾಲಿನಲ್ಲಿ ರೂ. 416.43 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ರಾಜ್ಯದ ಪಾಲು ರೂ.243.85 ಕೋಟಿ ಆಗಿದೆ.
"ರಾಜ್ಯ ನೋಡಲ್ ಖಾತೆ ಮಾರ್ಗಸೂಚಿಯ ಪ್ರಕಾರ, ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ನೆರವನ್ನು ರಾಜ್ಯ ನೋಡಲ್ ಖಾತೆಗೆ ಮೊದಲು ವರ್ಗಾಯಿಸಬೇಕಾಗುತ್ತದೆ. ಬಾಕಿಯಾದ ಕೇಂದ್ರದ ಪಾಲು ಹಾಗೂ ಅದಕ್ಕೆ ಸರಿಸಮನಾದ ರಾಜ್ಯದ ಪಾಲಾದ ರೂ.132.90 ಕೋಟಿ ಮೊತ್ತವು ರಾಜ್ಯ ನೋಡಲ್ ಖಾತೆಯಲ್ಲಿ ಹಾಗೂ 2022-23ನೇ ಸಾಲಿನ ವೆಚ್ಚದ ತಃಖ್ತೆಯಲ್ಲಿ ಪ್ರತಿಫಲಿಸಬೇಕಾಗುತ್ತದೆ" ಎಂದು ಶಿಕ್ಷಣ ಸಚಿವಾಲಯದ ಪತ್ರದಲ್ಲಿ ಹೇಳಲಾಗಿದೆ.
ಇದರೊಂದಿಗೆ, 2021-22ನೇ ಸಾಲಿನ ವೆಚ್ಚ ತಃಖ್ತೆಯಲ್ಲಿ ಕೇಂದ್ರದ ಪಾಲಾದ ರೂ. 8.95 ಕೋಟಿ ಮೊತ್ತದ ನಮೂದು ಋಣಾತ್ಮಕವಾಗಿದ್ದು, ತನ್ನ ಪಾಲನ್ನು ರಾಜ್ಯ ಸರ್ಕಾರ ವರ್ಗಾಯಿಸಿಲ್ಲ ಎಂದೂ ಪತ್ರದಲ್ಲಿ ಹೇಳಲಾಗಿದೆ.
ರಾಜ್ಯ ನೋಡಲ್ ಖಾತೆಯ ವರದಿ ಪ್ರಕಾರ, ಕೇಂದ್ರ ಸರ್ಕಾರದ ಬಡ್ಡಿ ಮೊತ್ತದ ಪಾಲಾದ ರೂ.20.19 ಕೋಟಿಯನ್ನು ಇನ್ನೂ ಠೇವಣಿ ಇಡಬೇಕಿದೆ. ಆದರೆ, ಅದಕ್ಕಾಗಿ ಆಗಸ್ಟ್ 31ರವರೆಗೆ ವಿನಾಯಿತಿ ನೀಡಲಾಗಿತ್ತು. ಹೀಗಾಗಿ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಮುಂದಿನ ನೆರವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಬಡ್ಡಿ ಮೊತ್ತವನ್ನು ಭಾರತೀಯ ಕ್ರೋಡೀಕೃತ ನಿಧಿಗೆ ಆದಷ್ಟೂ ಶೀಘ್ರ ವರ್ಗಾಯಿಸಬೇಕು ಎಂದು ಶಿಕ್ಷಣ ಸಚಿವಾಲಯವು ಒತ್ತಿ ಹೇಳಿದೆ.
ಪಿಎಂ-ಪೋಷಣ್ ಯೋಜನೆಯಡಿ 2023-24ನೇ ಸಾಲಿನ ಮೊದಲ ಕಂತನ್ನು ಬಿಡುಗಡೆ ಮಾಡುವ ಪ್ರಸ್ತಾವವನ್ನು ಪರಿಗಣಿಸಲು ಮೇಲಿನ ಅವಲೋಕನಗಳನ್ನು ಪಾಲನೆ ಮಾಡಬೇಕು ಎಂದೂ ಪತ್ರದಲ್ಲಿ ಒತ್ತಿ ಹೇಳಲಾಗಿದೆ.