ಚೆನ್ನೈ: ಸನಾತನ ಧರ್ಮದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರು ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ 'ಸನಾತನ ನಿರ್ಮೂಲನಾ ಸಮಾವೇಶ'ದಲ್ಲಿ ಭಾಗವಹಿಸಿ ಉದಯನಿಧಿ ಸ್ಟಾಲಿನ್ ಶನಿವಾರ ಮಾತನಾಡಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು 'ಸನಾತನ ವಿರೋಧಿ ಸಮ್ಮೇಳನ' ಎಂಬುದಾಗಿ ಆಯೋಜಿಸುವ ಬದಲು 'ಸನಾತನ ನಿರ್ಮೂಲನಾ ಸಮ್ಮೇಳನ' ಎಂದು ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು ಎಂದು ಮಾತು ಆರಂಭಿಸಿದರು.
ಕೆಲವು ವಿಷಯಗಳನ್ನು ನಾವು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಒಳ್ಳೆಯದು. ನಾವು ಡೆಂಗಿ, ಮಲೇರಿಯಾ ಅಥವಾ ಕೋವಿಡ್‌ನಂತಹ ಸೋಂಕನ್ನು ವಿರೋಧಿಸಬಾರದು. ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ವಿರುದ್ಧ ಮಾತನಾಡಿದರು.
ಅವರು ಸನಾತನ ಧರ್ಮದ ಕುರಿತು ಮಾಡಿದ ಭಾಷಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಅವರ ಹೇಳಿಕೆಗೆ ತೀವ್ರ ವಿರೋಧ, ಟೀಕೆ ವ್ಯಕ್ತವಾಗಿದೆ.
ಬಿಜೆಪಿ ಆಕ್ರೋಶ
ಬಿಜೆಪಿ ಐಟಿ ಸೆಲ್ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರ ಅಭಿಪ್ರಾಯವನ್ನು ವಿರೋಧಿಸುವ ಬದಲು ಅಭಿಪ್ರಾಯವನ್ನೇ ನಿರ್ಮೂಲನೆ ಮಾಡಬೇಕು. ಅವರು ಸನಾತನ ಧರ್ಮವನ್ನು ಅನುಸರಿಸುವ ದೇಶದ ಶೇ.80ರಷ್ಟು ಜನರ ಹತ್ಯೆಗೆ ಕರೆ ನೀಡಿದ್ದಾರೆ ಎಂದು ಅಮಿತ್ ಮಾಳವೀಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.