ಪೆರ್ಲ: ಪೆರ್ಲ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಎರಡು ದಿವಸಗಳ ಕಾಲ ನಡೆದ 52ನೇ ವರ್ಷದ ಗಣೇಶೋತ್ಸವ ಸಮಾರಂಭ ಬುಧವಾರ ಸಂಭ್ರಮದ ಘೋಷಯಾತ್ರೆಯೊಂದಿಗೆ ಸಂಪನ್ನಗೊಂಡಿತು. ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಿಂದ ಹೊರಟ ಆಕರ್ಷಕ ಮೆರವಣಿಗೆ ಪೆರ್ಲ ಚೆಕ್‍ಪೋಸ್ಟ್, ಅಯ್ಯಪ್ಪ ಭಜನಾಮಂದಿರ, ಬದಿ ದೈವಸ್ಥಾನ, ನಲ್ಕದ ಮೂಲಕ ಅಡ್ಕಸ್ಥಳ ಸಾಗಿ ಸೀರೆಹೊಳೆಯಲ್ಲಿ ಗಣೇಶ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು.
ಸಿಂಗಾರಿ ಮೇಳ, ಪುಟಾಣಿ ಮಕ್ಕಳು, ಬಾಲಕ-ಬಾಲಕಿಯರು, ಮಾತೆಯರು ಸೇರಿದಂತೆ 300ಕ್ಕೂ ಹೆಚ್ಚುಮಂದಿಯನ್ನೊಳಗೊಂಡ ಕುಣಿತ ಭಜನಾ ತಂಡಗಳು, ತುಳುನಾಡಿನ ಸಾಂಸ್ಕøತಿಕ ಕಲೆ ಪಿಲಿನಲಿಕೆಯ ತಂಡ, ಪೂಜಾ ತರುಣರ ತಂಡದ ನಾಸಿಕ್ ಬ್ಯಾಂಡ್, ಡಿಜೆ ಕುಣಿತ ಮೆರವಣಿಗೆಗೆ ಮೆರಗು ನೀಡಿತು. ಮೆರೆವಣಿಗೆಯುದ್ದಕ್ಕೂ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ರಂಗೇರಿಸಿದ ಕುಣಿತ ಭಜನೆ:
ಪೆರ್ಲ ಶ್ರೀ ಅಯ್ಯಪ್ ಕುಣಿತ ಬಜನಾ ಸಂಘ ಪೆರ್ಲ, ಏಕದಂತ ಕುಣಿತ ಭಜನಾ ಸಂಘ ಪೆರ್ಲ, ಶ್ರೀ ಶಾರದಾ ಕುಣಿತ ಭಜನಾ ಸಂಘ ಏಳ್ಕಾನ, ತತ್ವಮಸಿ ಕುಣಿತ ಭಜನಾ ಸಂಘ ಶೇಣಿ ತಂಡದ 300ಕ್ಕೂ ಹೆಚ್ಚು ಮಂದಿ ಭಜನಾರ್ಥಿಗಳು ಸಮವಸ್ತ್ರದೊಂದಿಗೆ ಮೆರವಣಿಗೆಯುದ್ದಕ್ಕೂ ಕುಣಿತಭಜನೆಯಲ್ಲಿ ಪಾಲ್ಗೊಂಡಿದ್ದರು.