ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ನೇತೃತ್ವದ ಹಿರಿಯ ನ್ಯಾಯಮೂರ್ತಿಗಳ ಸಮಿತಿಯು (ಕೊಲಿಜಿಯಂ) ನ್ಯಾಯಮೂರ್ತಿಗಳ ನೇಮಕ ಹಾಗೂ ವರ್ಗಾವಣೆ ವಿಚಾರವಾಗಿ ಮಾಡುವ ಶಿಫಾರಸುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮತ್ತೆ ಕಳವಳ ವ್ಯಕ್ತಪಡಿಸಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಿದ್ಧಾರ್ಥ ಮೃದುಲ್ ಅವರನ್ನು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವುದು ಕೂಡ ಕೊಲಿಜಿಯಂ ಶಿಫಾರಸುಗಳಲ್ಲಿ ಒಂದು.
ಕೋರ್ಟ್ ವ್ಯಕ್ತಪಡಿಸಿರುವ ಕಳವಳದ ವಿಚಾರವಾಗಿ ಒಂದು ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸಲಾಗುವುದು ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಮಾಡಿದ ಮನವಿಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ಮಾನ್ಯ ಮಾಡಿದೆ.
'ಹಲವಷ್ಟು ಸಂಗತಿಗಳನ್ನು ಹೇಳಬೇಕು ಅಂದುಕೊಂಡಿದ್ದೆ. ಆದರೆ ಅಟಾರ್ನಿ ಜನರಲ್ ಅವರು ಒಂದು ವಾರದ ಕಾಲಾವಕಾಶ ಮಾತ್ರ ಕೇಳುತ್ತಿರುವ ಕಾರಣ, ನಾನು ಮಾತುಗಳನ್ನು ತಡೆಹಿಡಿಯುತ್ತಿದ್ದೇನೆ... ಆದರೆ ಹೆಚ್ಚು ಕಾಲ ಸುಮ್ಮನೆ ಕುಳಿತುಕೊಳ್ಳುವುದಿಲ್ಲ' ಎಂದು ನ್ಯಾಯಮೂರ್ತಿ ಕೌಲ್ ಅವರು ಹೇಳಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಪ್ರತಿ 10 ದಿನಕ್ಕೆ ಒಮ್ಮೆ ನಡೆಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ವಕೀಲರ ಸಂಘ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಈ ನ್ಯಾಯಪೀಠ ನಡೆಸುತ್ತಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ 70 ಹೆಸರುಗಳ ಶಿಫಾರಸುಗಳು 2022ರ ನವೆಂಬರ್‌ನಿಂದಲೂ ಬಾಕಿ ಉಳಿದಿವೆ ಎಂದು ನ್ಯಾಯಪೀಠ ಹೇಳಿದೆ.
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಿದ್ಧಾರ್ಥ ಮೃದುಲ್ ಅವರನ್ನು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಬೇಕು ಎಂದು ಕೊಲಿಜಿಯಂ ಜುಲೈನಲ್ಲಿ ಶಿಫಾರಸು ಮಾಡಿತ್ತು. ಆದರೆ ಇವರ ನೇಮಕ ಕುರಿತು ಕೇಂದ್ರ ಸರ್ಕಾರವು ಇದುವರೆಗೂ ಅಧಿಸೂಚನೆ ಹೊರಡಿಸಿಲ್ಲ. 'ಮುಖ್ಯ ನ್ಯಾಯಮೂರ್ತಿಯ ನೇಮಕವು ಬಹಳ ಸೂಕ್ಷ್ಮವಾದ ವಿಚಾರ' ಎಂದು ನ್ಯಾಯಪೀಠ ಹೇಳಿದೆ.