HEALTH TIPS

ರಾಮ ಮಂದಿರ ಆಂದೋಲನದ ಇತಿಹಾಸ ಪ್ರದರ್ಶನ: ನೃಪೇಂದ್ರ ಮಿಶ್ರಾ

               ವದೆಹಲಿ: 'ರಾಮ ಮಂದಿರ ಸ್ಥಳದಲ್ಲಿ ನಡೆಸಲಾದ ಉತ್ಖನನದಲ್ಲಿ ದೊರೆತ ಪ್ರತಿಮೆಗಳು ಹಾಗೂ ಕಲಾಕೃತಿಗಳನ್ನು ಮತ್ತು ಮಂದಿರ ನಿರ್ಮಾಣಕ್ಕಾಗಿ ನಡೆಸಲಾದ ಆಂದೋಲನದ ಇತಿಹಾಸವನ್ನು ಅಯೋಧ್ಯೆಯ ಅಂತರರಾಷ್ಟ್ರೀಯ ರಾಮ ಕಥಾ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು' ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಹೇಳಿದ್ದಾರೆ.

               'ಆಂದೋಲನದ ಕಾನೂನು, ರಾಜಕೀಯ ಮತ್ತು ಧಾರ್ಮಿಕ ಪ್ರಯಾಣದ ವಿವರಗಳನ್ನು ಪ್ರಸ್ತುತಪಡಿಸುವ ವಿಶೇಷ ಕೋಶವನ್ನು ಸಹ ರಚಿಸಲಾಗುತ್ತದೆ' ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

                 'ಈ ವಸ್ತು ಸಂಗ್ರಹಾಲಯವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಗುತ್ತಿಗೆ ನೀಡಲಾಗಿದೆ. ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಉತ್ಖನನ ನಡೆಸಿದ ಸಂದರ್ಭದಲ್ಲಿ ಕೆಲವು ವಸ್ತುಗಳು ದೊರೆತಿವೆ. ಮಂದಿರ ನಿರ್ಮಾಣದ ಕಾಮಗಾರಿಯ ವೇಳೆಯೂ ಕೆಲವು ಪ್ರಾಚೀನ ವಸ್ತುಗಳು ದೊರೆತಿವೆ. ಅವುಗಳನ್ನು ಸುರಕ್ಷಿತವಾಗಿಡಲಾಗಿದೆ. ಇವುಗಳಲ್ಲಿ ಕೆಲವು ಕಲಾಕೃತಿ ಅಥವಾ ವಿಗ್ರಹಗಳನ್ನು ನ್ಯಾಯಾಲಯದ ಆದೇಶದದಿಂದ ರಕ್ಷಿಸಲಾಗಿದ್ದರೆ, ಕೆಲವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ರಕ್ಷಿಸಿದೆ' ಎಂದಿದ್ದಾರೆ.

                  'ಎಎಸ್‌ಐನ ಅನುಮತಿಯೊಂದಿಗೇ ವಿಗ್ರಹಗಳನ್ನು, ಕಲಾಕೃತಿ ಹಾಗೂ ಪಳೆಯುಳಿಕೆಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗುವುದು' ಎಂದು ಹೇಳಿದ್ದಾರೆ.

'ವಸ್ತು ಸಂಗ್ರಹಾಲಯದಲ್ಲಿ ವಿವಿಧ ಭಾಗಗಳಿವೆ. ಒಂದರಲ್ಲಿ ಉತ್ಖನನ ಹಾಗೂ ಮಂದಿರ ನಿರ್ಮಾಣದ ವೇಳೆ ದೊರೆತ ವಸ್ತುಗಳನ್ನು ಇರಿಸಲಾಗುವುದು. ಮತ್ತೊಂದರಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ 2019ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶ ಸೇರಿದಂತೆ ಕಾನೂನು, ರಾಜಕೀಯ ಮತ್ತು ಧಾರ್ಮಿಕ ಆಂದೋಲನದ 500 ವರ್ಷಗಳ ಇತಿಹಾಸವನ್ನು ಪ್ರದರ್ಶನ ಮಾಡಲಾಗುವುದು' ಎಂದು ವಿವರಿಸಿದ್ದಾರೆ.

                                                   'ಆರ್ಥಿಕ ಚಟುವಟಿಕೆ ಹೆಚ್ಚಳ ಸಾಧ್ಯತೆ'

                 'ರಾಮಮಂದಿರ ಉದ್ಘಾಟನೆಯ ಬಳಿಕ ಅಯೋಧ್ಯೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಗೆಯೇ ಈ ನಗರ ನವದೆಹಲಿಯಷ್ಟು ವಿಸ್ತರಣೆಯಾಗಬಹುದು' ಎಂದು ನೃಪೇಂದ್ರ ಮಿಶ್ರಾ ಹೇಳಿದರು.

                   'ಬಿಹಾರ ಛತ್ತೀಸಗಢ ಮತ್ತು ನೇಪಾಳದಲ್ಲಿರುವ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳ ನವೀಕರಣ ಮಾಡುವಂತೆ ಕೋರಿ ಈಗಾಗಲೇ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಬೇಡಿಕೆಗಳು ಬಂದಿವೆ' ಎಂದರು. 'ಆದರೆ ನವೀಕರಣದ ಜವಾಬ್ದಾರಿಯನ್ನು ಸ್ಥಳೀಯರಿಗೆ ವಹಿಸಲು ನಿರ್ಧರಿಸಿದ್ದೇವೆ' ಎಂದೂ ತಿಳಿಸಿದರು.‌

                  ನೆಲಮಹಡಿ ಡಿಸೆಂಬರ್‌ ಅಂತ್ಯಕ್ಕೆ ಮುಕ್ತಾಯ: 'ಅಯೋಧ್ಯೆ ರಾಮ ಮಂದಿರದ ನೆಲ ಮಹಡಿ ನಿರ್ಮಾಣ ಕಾಮಗಾರಿ ಡಿಸೆಂಬರ್‌ ಅಂತ್ಯಕ್ಕೆ ಮುಕ್ತಾಯವಾಗಲಿದ್ದು ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುವ ನಿರೀಕ್ಷೆಯಿದೆ' ಎಂದು ನೃಪೇಂದ್ರ ಮಿಶ್ರಾ ಅವರು ತಿಳಿಸಿದ್ದಾರೆ.

                 'ಜನವರಿ 20ರಿಂದ 24ರ ನಡುವೆ ನಡೆಯುವ 'ಪ್ರಾಣ ಪ್ರತಿಷ್ಠಾಪನಾ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ. ಆದರೆ ನಿರ್ದಿಷ್ಟ ದಿನಾಂಕ ನಿಗದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries