ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ ಬಿಜೆಪಿಯ ಮಹಿಳಾ ಮೋರ್ಚಾವತಿಯಿಂದ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
'ಇದು ಸಾಮಾನ್ಯ ಮಸೂದೆಯಲ್ಲ. ಹೊಸ ಪ್ರಜಾಸತ್ತಾತ್ಮಕ ಬದ್ಧತೆ ಕುರಿತು ನವಭಾರತ ಮಾಡಿರುವ ಘೋಷಣೆಯಾಗಿದೆ' ಎಂದು ಮೋದಿ ಬಣ್ಣಿಸಿದರು.
'ಬಿಹಾರದ ಆರ್‌ಎಲ್‌ಡಿ, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಪ್ರತಿಗಳನ್ನು ಹರಿದುಹಾಕಿದ್ದವು. ಆದರೆ, ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಈ ಹತ್ತು ವರ್ಷಗಳ ಅವಧಿಯಲ್ಲಿ ಮಹಿಳೆಯರು ಶಕ್ತಿಶಾಲಿಗಳಾಗಿ ಹೊರಹೊಮ್ಮಿದ್ದಾರೆ. ಹೀಗಾಗಿಯೇ ಆರ್‌ಎಲ್‌ಡಿ, ಎಸ್‌ಪಿ ಸೇರಿದಂತೆ ಹಲವಾರು ಪ್ರಾದೇಶಿಕ ಪಕ್ಷಗಳು ಈಗ ಮಸೂದೆಯನ್ನು ಬೆಂಬಲಿಸಬೇಕಾಯಿತು' ಎಂದು ಮೋದಿ ಹೇಳಿದರು.
'ಈ ಮಸೂದೆಯನ್ನು ಮಂಡಿಸುವ ಮುನ್ನ, ನನ್ನ ಸರ್ಕಾರ ಹಲವಾರು ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಕ್ರಮ ತೆಗೆದುಕೊಂಡಿತ್ತು. ಇದು ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಿತ್ತು. ಈ ಕಾರಣಕ್ಕಾಗಿಯೇ ಪ್ರತಿಯೊಂದು ಪಕ್ಷ ಮಸೂದೆಯನ್ನು ಬೆಂಬಲಿಸಬೇಕಾಯಿತು' ಎಂದರು.
'ಎಲ್ಲ ಹಂತಗಳಲ್ಲಿಯೂ ಮಹಿಳೆಯರನ್ನು ಸಶಕ್ತಗೊಳಿಸಲು ನಾವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರದ ಮುದ್ರೆ ಪಡೆಯುವಲ್ಲಿ ಯಾವುದೇ ವ್ಯಕ್ತಿಯ ರಾಜಕೀಯ ಹಿತಾಸಕ್ತಿಯು ಅಡ್ಡಿಯಾಗುವುದಕ್ಕೆ ನಾವು ಅವಕಾಶ ನೀಡಲಿಲ್ಲ' ಎಂದರು.
'ಈ ಹಿಂದೆಯೆಲ್ಲಾ, ಸಂಸತ್‌ನಲ್ಲಿ ಈ ಮಸೂದೆಯು ಮಂಡನೆಯಾದ ಸಂದರ್ಭಗಳಲ್ಲಿ ಔಪಚಾರಿಕ ಪ್ರಕ್ರಿಯೆಗಳನ್ನು ನೆರವೇರಿಸಲಾಗುತ್ತಿತ್ತು. ಮಸೂದೆಯನ್ನು ಅಂಗೀಕರಿಸುವ ವಿಚಾರವಾಗಿ ಪ್ರಯತ್ನಗಳು ನಡೆಯುತ್ತಿರಲಿಲ್ಲ. ಮಹಿಳೆಯರನ್ನು ಅವಮಾನಿಸುವಂತಹ ಪ್ರಯತ್ನಗಳೂ ನಡೆದಿದ್ದವು' ಎಂದು ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ಟೀಕಾಪ್ರಹಾರ ನಡೆಸಿದರು.
'ಈ ಮಸೂದೆಯನ್ನು ಅಂಗೀಕರಿಸುವಂತಹ ಅವಕಾಶ ದೊರೆತಿದ್ದು ಬಿಜೆಪಿಯ ಅದೃಷ್ಟ. ಪಕ್ಷವು ಕಳೆದ ಮೂರು ದಶಕಗಳಿಂದ ಹೊಂದಿದ್ದ ಬದ್ಧತೆಗೆ ಈಗ ಪ್ರತಿಫಲ ಸಿಕ್ಕಂತಾಗಿದೆ' ಎಂದೂ ಹೇಳಿದರು.