ನವದೆಹಲಿ: ನೂತನ ಸಂಸತ್ ಭವನದಲ್ಲಿ ಮೊದಲ ಅಧಿವೇಶನದ ಆರಂಭದ ಸಲುವಾಗಿ ಕೇಂದ್ರ ಸರ್ಕಾರವು ನೀಡಿರುವ ಸಂವಿಧಾನದ ಪ್ರಸ್ತಾವನೆಯಲ್ಲಿ, 'ಸಮಾಜವಾದಿ, ಜಾತ್ಯತೀತ ಮತ್ತು ಸಮಗ್ರತೆ' ಪದಗಳನ್ನು ತೆಗೆದುಹಾಕಲಾಗಿದೆ. ಸರ್ಕಾರವು ಸಂವಿಧಾನವನ್ನು ತಿರುಚಿದೆ, ವಿರೂಪಗೊಳಿಸಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ವಿಷಯವನ್ನು ಲೋಕಸಭೆಯ ವಿಶೇಷ ಅಧಿವೇಶನದ ಉಳಿದ ದಿನಗಳಲ್ಲಿ ಪ್ರಸ್ತಾಪಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ.
ಸಂವಿಧಾನದ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ತಂದಿರುವ ಬದಲಾವಣೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ಬಹಿರಂಗಪಡಿಸಿದ್ದರು. ಅವರು, 'ಸರ್ಕಾರವು ಸಂವಿಧಾನದ ಪ್ರಸ್ತಾವನೆಯನ್ನು ಬದಲಾಯಿಸಿದ್ದು ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳನ್ನು ಕೈಬಿಟ್ಟಿರುವ ಸಂವಿಧಾನದ ಪ್ರತಿಗಳನ್ನು ಸಂಸದರಿಗೆ ನೀಡಿದೆ' ಎಂದು ಆರೋಪಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ. ಆದರೆ, ಸರ್ಕಾರವು ನೀಡಿದ್ದ ಪ್ರತಿಯಲ್ಲಿ 'ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ' ಎಂಬುದನ್ನೂ 'ರಾಷ್ಟ್ರೀಯ ಏಕತೆ' ಎಂದು ಬದಲಿಸಿ ಮುದ್ರಿಸಲಾಗಿದೆ.
ಅಧೀರ್ ರಂಜನ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾನೂನು ಸಚಿವ ಅರ್ಜುನ್ ರಾಮ್ ಮೆಘವಾಲ್, 'ಸಂವಿಧಾನದ ಮೂಲ ಪ್ರಸ್ತಾವನೆ ಇರುವ ಪ್ರತಿಯನ್ನು ಸಂಸದರಿಗೆ ನೀಡಲಾಗಿದೆ. ಮೂಲ ಪ್ರತಿಯಲ್ಲಿ 'ಸಮಾಜವಾದಿ, ಜಾತ್ಯತೀತ' ಎಂಬ ಪದಗಳು ಇರಲಿಲ್ಲ. ಅವುಗಳನ್ನು ಆನಂತರ ತಿದ್ದುಪಡಿ ಮಾಡಿ ಸೇರಿಸಲಾಗಿದೆ' ಎಂದು ಸಮರ್ಥಿಸಿಕೊಂಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಅಧೀರ್, 'ಇಂದು ನೀವು ಯಾರಿಗಾದರೂ ಸಂವಿಧಾನದ ಪ್ರತಿ ನೀಡುತ್ತೀರಿ ಎಂದಾದರೆ, ಅದು ಈಗ ಜಾರಿಯಲ್ಲಿರುವ ಪ್ರತಿಯೇ ಆಗಿರಬೇಕು. ಹಳೆಯದನ್ನು ನೀಡಬಾರದು' ಎಂದಿದ್ದಾರೆ. ಜತೆಗೆ ಹೀಗೆ ಮಾಡುವಲ್ಲಿ ಸರ್ಕಾರದ ಉದ್ದೇಶವೇನು ಎಂಬುದು ಅರ್ಥವಾಗತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
1949ರಲ್ಲಿ ಅಂಗೀಕರಿಸಲಾದ ಸಂವಿಧಾನದ ಮೂಲ ಪ್ರತಿಯಲ್ಲಿ 'ಸಮಾಜವಾದಿ, ಜಾತ್ಯತೀತ ಮತ್ತು ಸಮಗ್ರತೆ' ಎಂಬ ಪದಗಳು ಇರಲಿಲ್ಲ. 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು ಅವುಗಳನ್ನು ಸೇರಿಸಲಾಗಿತ್ತು. ಸರ್ಕಾರವು ಈಗ ಸಂಸದರಿಗೆ ಉಡುಗೊರೆಯಾಗಿ ನೀಡಿರುವ ಸಂವಿಧಾನದ ಪ್ರತಿಯಲ್ಲಿ ಉಳಿದೆಲ್ಲಾ ಅಂಶಗಳು ಇಂದಿನದ್ದೇ ಆಗಿವೆ. ಈಗ ಬಳಕೆಯಲ್ಲಿರುವ ಅಧಿಕೃತ ಪ್ರಸ್ತಾವನೆಯ ಪಠ್ಯವನ್ನೂ ಈ ಪ್ರತಿಯ ಪುಟವೊಂದರಲ್ಲಿ ನೀಡಲಾಗಿದೆ. ಆದರೆ, ಪ್ರತಿಯ ಆರಂಭದಲ್ಲಿ ಹಳೆಯ ಪ್ರಸ್ತಾವನೆಯನ್ನು ನೀಡಿದೆ. ಇದು ಹಳೆಯ ಅಥವಾ ಮೂಲ ಪ್ರಸ್ತಾವನೆ ಎಂದು ಸೂಚಿಸುವ ಯಾವುದೇ ಅಡಿಟಿಪ್ಪಣಿ ಅಥವಾ ಸೂಚನೆಯನ್ನು ಆ ಪುಟದಲ್ಲಿ ನೀಡಿಲ್ಲ.