ತಿರುವನಂತಪುರಂ; ಎಂಟು ವರ್ಷದ ಮುಹಮ್ಮದ್ ಯಾಹಿಯಾ ಮುದ್ದುಕೃಷ್ಣನ ವೇಷ ಧರಿಸುವುದು ಸರಿಯಲ್ಲ ಎಂದು ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸ ಹಾಗೂ ಜಮಾತೆ ಇಸ್ಲಾಮಿಯ ಮಾಜಿ ನಾಯಕ ಓ ಅಬ್ದುಲ್ಲಾ ಹೇಳಿದ್ದಾರೆ.
ಇದು ನಮ್ಮ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿದೆ. ಹಿಂದೂ ಪುರಾಣವು ಇಸ್ಲಾಮಿಕ್ ಪರಿಕಲ್ಪನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಅಬ್ದುಲ್ಲಾ ಹೇಳಿದರು. ಅಬ್ದುಲ್ಲಾ ಅವರು ನಿನ್ನೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ಚರ್ಚೆಯಲ್ಲಿ ಮಾತನಾಡುತ್ತಿದ್ದರು.
ಕೋಯಿಕ್ಕೋಡ್ ನ ಬಾಲಗೋಕುಲಂ ಆಶ್ರಯದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಪುಟಾಣಿ ಯಾಹಿಯಾ ಮುದ್ದುಕೃಷ್ಣ ವೇಷಧರಿಸಿ ವೈರಲ್ ಆಗಿದ್ದ. ಮೊಹಮ್ಮದ್ ಯಾಹಿಯಾ ಕೋಯಿಕ್ಕೋಡ್‍ನ ವೆಸ್ಟ್‍ಹಿಲ್ ಎಸ್.ಎಸ್ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುವ ತಲಶ್ಶೇರಿ ಮೂಲದ ಸನೇಜ್ ಮತ್ತು ರುಬಿಯಾ ದಂಪತಿಯ ಹಿರಿಯ ಪುತ್ರ.
ಮಗುವಿನ ಮುದ್ದುಕೃಷ್ಣ ವೇಷಧಾರಣೆಗೆ ತಂದೆ, ತಾಯಿ ಮತ್ತು ಅಜ್ಜಿಯ ಸಂಪೂರ್ಣ ಬೆಂಬಲವಿತ್ತು. ಉಣ್ಣಿಕಣ್ಣನಿಗೆ ಮೇಕಪ್ ಮಾಡಿ ಮಗನನ್ನು ಶೋಭಾ ಯಾತ್ರೆಗೆ ಕರೆದೊಯ್ದಿರುವುದು ಅಜ್ಜಿ ಮತ್ತು ತಾಯಿ. ಕೇರಳೀಯರು ಯಾಹಿಯಾ ಮತ್ತು ಅವರ ಕುಟುಂಬವನ್ನು ಹೊಗಳಿದ್ದರು.