HEALTH TIPS

ವಿದ್ಯಾರ್ಥಿಗಳ ಹತ್ಯೆ: ತನಿಖೆ ಆರಂಭಿಸಿದ ಸಿಬಿಐ

                 ಗುವಾಹಟಿ: ಮೈತೇಯಿ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಹತ್ಯೆಯ ಬಗ್ಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಶೇಷ ತಂಡವು ಮಣಿಪುರದಲ್ಲಿ ಬುಧವಾರ 'ಸ್ಥಳ ತನಿಖೆ' ಆರಂಭಿಸಿದೆ. ಈ ನಡುವೆ ಇಂಫಾಲ್‌ ಕಣಿವೆಯಲ್ಲಿ ಪ್ರತಿಭಟನೆ ಕೂಡ ತೀವ್ರವಾಗಿದೆ. ಅಲ್ಲಿನ ಆಡಳಿತವು ಹಿಂಸಾಚಾರ ತಡೆಯಲು ಕರ್ಫ್ಯೂ ಜಾರಿಗೊಳಿಸಿದೆ.

              ಸಿಬಿಐ ವಿಶೇಷ ನಿರ್ದೇಶಕ ಅಜಯ್ ಭಟ್ನಾಗರ್ ನೇತೃತ್ವದ ಸಿಬಿಐ ತಂಡವು ವಿಶೇಷ ವಿಮಾನದಲ್ಲಿ ಇಂಫಾಲ್‌ಗೆ ಬಂದಿದೆ. ಈ ತಂಡದಲ್ಲಿ ಐವರು ಸದಸ್ಯರು ಇದ್ದಾರೆ. ಇಂಫಾಲ್‌ಗೆ ಬಂದ ತಂಡವು ಅಲ್ಲಿಂದ ನೇರವಾಗಿ, ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು ಎನ್ನಲಾದ ಸ್ಥಳಕ್ಕೆ ಧಾವಿಸಿತು.

                ಇಬ್ಬರು ವಿದ್ಯಾರ್ಥಿಗಳ ಶವದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರದಲ್ಲಿ ಇಂಫಾಲ್‌ ಕಣಿವೆಯಲ್ಲಿ ಮಂಗಳವಾರ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಕುಕಿ ಸಮುದಾಯಕ್ಕೆ ಸೇರಿದ 'ಶಸ್ತ್ರಸಜ್ಜಿತ ದುಷ್ಕರ್ಮಿಗಳು' ಈ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ, ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

                   ವಿದ್ಯಾರ್ಥಿಗಳು ಬುಧವಾರ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿ ಉಂಟುಮಾಡಲು ಯತ್ನಿಸಿದಾಗ, ಅವರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಸಿಡಿಸಬೇಕಾಯಿತು. ಈ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಮೈತೇಯಿ ಸಮುದಾಯದ ಪ್ರಾಬಲ್ಯ ಇರುವ ಥೌಬಲ್‌ ಜಿಲ್ಲೆಯಲ್ಲಿ ಉದ್ರಿಕ್ತ ಗುಂಪೊಂದು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದೆ ಎಂಬ ವರದಿಗಳಿವೆ.

ನಾಪತ್ತೆಯಾಗಿದ್ದ ವಿದ್ಯಾರ್ಥಿಗಳನ್ನು ಪತ್ತೆ ಮಾಡಲು ಬಿಜೆಪಿ ನೇತೃತ್ವದ ಸರ್ಕಾರವು ವಿಫಲವಾಗಿದೆ ಎಂದು ಆರೋಪಿಸಿ ಮಣಿಪುರದ ಜನಪ್ರಿಯ ಚಿತ್ರನಟ ರಾಜ್‌ಕುಮಾರ್ ಸೊಮೊರೇಂದ್ರ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಭದ್ರತಾ ಪಡೆಗಳು ಪ್ರತಿಭಟನಕಾರರ ವಿರುದ್ಧ ಮಂಗಳವಾರ ಹಾಗೂ ಬುಧವಾರ ಕೈಗೊಂಡ ಕ್ರಮಗಳನ್ನು ಕೂಡ ಅವರು ಖಂಡಿಸಿದ್ದಾರೆ.

                  ಸರ್ಕಾರದ ಮೇಲೆ ಒತ್ತಡ ಹೆಚ್ಚಿದ ನಂತರ, ಹಿಂಸಾ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಭರವಸೆ ನೀಡಿದ್ದಾರೆ. 'ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಅವರು ಪರಿಸ್ಥಿತಿಯ ಮೇಲೆ ಗಮನ ಇರಿಸಿದ್ದಾರೆ' ಎಂದು ಸಿಂಗ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಇಂಫಾಲ್ ಕಣಿವೆಯ 19 ಪೊಲೀಸ್ ಠಾಣೆಗಳ ವ್ಯಾಪ್ತಿ ಹೊರತುಪಡಿಸಿ ಇತರ ಕಡೆಗಳಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಿದೆ.

                                            ಆರೋಪ ಅಲ್ಲಗಳೆದ ಆರ್‌ಎಎಫ್‌

               ಇಂಫಾಲ್ (PTI): ಇಬ್ಬರು ವಿದ್ಯಾರ್ಥಿಗಳ ಹತ್ಯೆಯಿಂದ ಆಕ್ರೋಶಿತರಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಉದ್ದೇಶಿಸಿ ಜಾತಿ ಸಮುದಾಯ ಆಧಾರಿತ ಹೇಳಿಕೆಗಳನ್ನು ತನ್ನ ಸಿಬ್ಬಂದಿ ನೀಡಿಲ್ಲ ಎಂದು ಸಿಆರ್‌ಪಿಎಫ್‌/ಆರ್‌ಎಎಫ್‌ ಸ್ಪಷ್ಟಪಡಿಸಿದೆ.

                 ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಲಾಗಿರುವ ವಿಡಿಯೊ ಒಂದರಲ್ಲಿ ಆರ್‌ಎಎಫ್‌ ಸಿಬ್ಬಂದಿಯು 'ನಮ್ಮ ಜಾತಿಯವರಲ್ಲ ಏನಾದರೂ ಮಾಡಿ' ಎಂದು ಹೇಳಿದ್ದಾರೆ ಎಂಬ ಆರೋಪ ಇದೆ. ಈ ದೃಶ್ಯವನ್ನು ವೀಕ್ಷಿಸಿದವರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

                 'ಹಿಂಸಾಕೃತ್ಯದಲ್ಲಿ ತೊಡಗಿದ್ದ ಗುಂಪನ್ನು ನಿಭಾಯಿಸುವ ಸಂದರ್ಭದಲ್ಲಿ ಆರ್‌ಎಎಫ್‌ ಸಿಬ್ಬಂದಿ ಜಾತಿವಾದಿ ಮಾತುಗಳನ್ನು ಆಡಿರುವಂತೆ ತೋರಿಸುವ ವಿಡಿಯೊ ಒಂದು ವಾಟ್ಸ್‌ಆಯಪ್‌ ಗುಂಪುಗಳಲ್ಲಿ ಹಾಗೂ ಟ್ವಿಟರ್ ಮೂಲಕ ಹರಿದಾಡುತ್ತಿದೆ. ಆದರೆ ಅಲ್ಲಿರುವ ಧ್ವನಿ ಆರ್‌ಎಎಫ್‌ ಸಿಬ್ಬಂದಿಯದ್ದಲ್ಲ. ವಿಡಿಯೊ ಸೃಷ್ಟಿ ಮಾಡಿದವರು ಉದ್ದೇಶಪೂರ್ವಕವಾಗಿ ಜಾತಿವಾದಿ ಮಾತುಗಳನ್ನು ತಮ್ಮದೇ ಧ್ವನಿಯಲ್ಲಿ ದಾಖಲಿಸಿ ಆರ್‌ಎಎಫ್‌ ಹೆಸರು ಹಾಳುಮಾಡಲು ಯತ್ನಿಸಿರುವಂತೆ ಕಾಣುತ್ತಿದೆ. ಅತ್ಯುನ್ನತ ಮಟ್ಟದ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಆರ್‌ಎಎಫ್‌ ಸಿಬ್ಬಂದಿಯ ಹೆಸರು ಕೆಡಿಸಲು ಹಾಗೂ ಅವರನ್ನು ಅಧೀರರನ್ನಾಗಿಸಲು ಈ ವಿಡಿಯೊ ಸೃಷ್ಟಿಸಲಾಗಿದೆ' ಎಂದು ಪೊಲೀಸರು 'ಎಕ್ಸ್‌' ವೇದಿಕೆಯ ಮೂಲಕ ಹೇಳಿಕೆ ನೀಡಿದ್ದಾರೆ.

                                                     ಮುಖ್ಯಮಂತ್ರಿ ವಜಾಕ್ಕೆ ಖರ್ಗೆ ಒತ್ತಾಯ

                 ನವದೆಹಲಿ (PTI): 'ಹಿಂಸಾಚಾರವು ಇನ್ನೂ ನಡೆಯದಂತೆ ನೋಡಿಕೊಳ್ಳುವ ಮೊದಲ ಹೆಜ್ಜೆಯಾಗಿ ಮಣಿಪುರದ ಅಸಮರ್ಥ ಮುಖ್ಯಮಂತ್ರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದಿಂದ ಕಿತ್ತುಹಾಕಬೇಕು' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ಮಣಿಪುರದ ಪರಿಸ್ಥಿತಿಯನ್ನು ಉಲ್ಲೇಖಿಸಿ ಖರ್ಗೆ ಅವರು ಪ್ರಧಾನಿ ವಿರುದ್ಧವೂ ಟೀಕಾಪ್ರಹಾರ ನಡೆಸಿದ್ದಾರೆ. 'ಮಣಿಪುರದ ಜನ 147 ದಿನಗಳಿಂದ ನೋವು ಅನುಭವಿಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಅವರಿಗೆ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ. ಹಿಂಸಾಚಾರದಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರುವುದನ್ನು ತೋರಿಸುವ ಭೀಭತ್ಸ ಚಿತ್ರಗಳು ದೇಶವನ್ನು ಮತ್ತೆ ಆಘಾತಗೊಳಿಸಿವೆ' ಎಂದು ಖರ್ಗೆ ಅವರು 'ಎಕ್ಸ್' ವೇದಿಕೆಯಲ್ಲಿ ಬರೆದಿದ್ದಾರೆ.

                            'ಈ ಸಂಘರ್ಷದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಹಿಂಸಾಚಾರವನ್ನು ಒಂದು ಅಸ್ತ್ರದಂತೆ ಬಳಸಿಕೊಳ್ಳಲಾಗಿದೆ ಎಂದು ಈಗ ಅನಿಸುತ್ತಿದೆ. ಸುಂದರ ಮಣಿಪುರ ರಾಜ್ಯವು ಕದನಭೂಮಿಯಂತೆ ಆಗಿದೆ. ಇವೆಲ್ಲದಕ್ಕೂ ಬಿಜೆಪಿ ಕಾರಣ' ಎಂದು ಅವರು ಆರೋಪಿಸಿದ್ದಾರೆ.

ಪರಿಸ್ಥಿತಿ ಸಹಜವಾಗಿಸಲು ಯತ್ನ (ನ್ಯೂಯಾರ್ಕ್ ವರದಿ): ಮಣಿಪುರದಲ್ಲಿ ಪರಿಸ್ಥಿತಿ ಸಹಜವಾಗುವಂತೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರಯತ್ನ ನಡೆಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

                    'ಮಣಿಪುರದಲ್ಲಿನ ಸಮಸ್ಯೆಯ ಒಂದು ಆಯಾಮವು ವಲಸಿಗರಿಂದ ಆಗಿರುವ ಪರಿಣಾಮಗಳಿಗೆ ಸಂಬಂಧಿಸಿದೆ' ಎಂದು ಜೈಶಂಕರ್ ಅವರು ಇಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

                     'ಆದರೆ ವಲಸೆಗೂ ಮುಂಚಿನ ಕಾರಣಗಳಿಂದಾಗಿ ಕೂಡ ಬಿಗುವಿನ ಸ್ಥಿತಿ ಇದೆ' ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries