HEALTH TIPS

ಉಮ್ಮನ್ ಚಾಂಡಿ ಸಿಲುಕಿಸಲು ಸಂಚು- ತನಿಖೆಗೆ ಕಾಂಗ್ರೆಸ್‌ ಆಗ್ರಹ

                ತಿರುವನಂತಪುರ (PTI): ಸೋಲಾರ್ ಹಗರಣಕ್ಕೆ ಸಂಬಂಧಿಸಿದ ಲೈಂಗಿಕ ಶೋಷಣೆ ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ, ದಿವಂಗತ ಉಮ್ಮನ್ ಚಾಂಡಿ ಅವರನ್ನು ಸಿಲುಕಿಸುವ ಸಂಚಿನ ಹಿಂದೆ ಯಾರ ಕೈವಾಡವಿದೆ ಎಂಬುದರ ಪತ್ತೆಗೆ ತನಿಖೆ ಆಗಬೇಕು ಎಂದು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ ಯುಡಿಎಫ್ ಭಾನುವಾರ ಒತ್ತಾಯಿಸಿದೆ.

            ಸೋಲಾರ್ ಹಗರಣದ ಪ್ರಮುಖ ಆರೋಪಿ ಮಹಿಳೆಯೊಬ್ಬರು ಚಾಂಡಿ ವಿರುದ್ಧ ಮಾಡಿರುವ ಆರೋಪದ ಹಿಂದೆ ಕೆಲವು ರಾಜಕೀಯ ನಾಯಕರ ಕೈವಾಡವಿದೆ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹೇಳಿರುವುದರಿಂದ ಯುಡಿಎಫ್ ಈ ಬೇಡಿಕೆ ಮುಂದಿಟ್ಟಿದೆ.

             ಇಲ್ಲಿನ ಮ್ಯಾಜಿಸ್ಟ್ರೀಯಲ್ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಸಿಬಿಐ, ಚಾಂಡಿ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಸಂಚಿನ ಹಿಂದೆ ಇರುವ ರಾಜಕೀಯ ನಾಯಕರನ್ನು ಹೆಸರಿಸಿರುವ ಬಗ್ಗೆಯೂ ವರದಿಯಾಗಿದೆ. ಈ ವರದಿಯಲ್ಲಿ ಕೇರಳ ಕಾಂಗ್ರೆಸ್‌ (ಬಿ) ಶಾಸಕ ಕೆ.ಬಿ. ಗಣೇಶ್‌ಕುಮಾರ್‌ ಮತ್ತು ಇವರ ಹತ್ತಿರದ ಸಂಬಂಧಿ ಶರಣ್ಯ ಮನೋಜ್‌ ಅವರ ಹೆಸರು ಉಲ್ಲೇಖವಾಗಿದೆ. ಕೇರಳ ಕಾಂಗ್ರೆಸ್‌ (ಬಿ), ಆಡಳಿತರೂಢ ಎಲ್‌ಡಿಎಫ್‌ ಜತೆಗೆ ಪಾಲುದಾರ ಪಕ್ಷವಾಗಿದೆ.

ಈ ಬೆಳವಣಿಗೆಯ ನಂತರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಕಾಂಗ್ರೆಸ್ ನಾಯಕನ ವಿರುದ್ಧ ಪಿತೂರಿ ನಡೆಸಿರುವವರನ್ನು ಸಿಬಿಐ ನ್ಯಾಯದ ಕಟಕಟೆಗೆ ತರಬೇಕು ಎಂದು ಒತ್ತಾಯಿಸಿದರು.

                    ರಾಜ್ಯದಲ್ಲಿ ಆಗಿನ ಯುಡಿಎಫ್ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಈ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿರುವ ಅವರು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರೂ ಪಿತೂರಿಯ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.

           ಚಾಂಡಿ ವಿರುದ್ಧ ಆರೋಪ ಮಾಡುವ ಮೂಲಕ ಆಗಿನ ಯುಡಿಎಫ್ ಸರ್ಕಾರವನ್ನು ಉರುಳಿಸುವ ಷಡ್ಯಂತ್ರ ಇದಾಗಿದ್ದು, ಕೇರಳದ ಈಗಿನ ಮುಖ್ಯಮಂತ್ರಿಯ ಪಾತ್ರ ಇದರಲ್ಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇದೇ 12 ರಂದು ನಡೆಯುವ ಪಕ್ಷದ ನಾಯಕತ್ವದ ಸಭೆಯಲ್ಲಿ ಈ ವಿಷಯದ ಬಗ್ಗೆಯೂ ಚರ್ಚಿಸಲಾಗುವುದು ಎಂದು ಕಾಂಗ್ರೆಸ್‌ ಸಂಸದ ಕೆ.ಮುರಳೀಧರನ್‌ ಪ್ರತಿಕ್ರಿಯಿಸಿದ್ದಾರೆ.

                'ಇದರಲ್ಲಿ ಯಾವುದೇ ರಾಜಕೀಯ ಪಿತೂರಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಚಾಂಡಿ ವಿರುದ್ಧ ಅನಗತ್ಯ ಆರೋಪಗಳಿಂದ ತಮಗೆ ನೋವುಂಟಾಗಿದೆ' ಎಂದು ಕೇರಳ ಕಾಂಗ್ರೆಸ್‌ (ಬಿ) ಶಾಸಕ ಕೆ.ಬಿ. ಗಣೇಶ್‌ಕುಮಾರ್‌ ಹೇಳಿದ್ದಾರೆ.

            'ದೂರುದಾರರ ಪ್ರಾಥಮಿಕ ಪತ್ರದಲ್ಲಿ ಚಾಂಡಿ ವಿರುದ್ಧ ಯಾವುದೇ ಲೈಂಗಿಕ ದೌರ್ಜನ್ಯದ ಆರೋಪಗಳಿಲ್ಲ ಮತ್ತು ಈ ಪ್ರಕರಣದಲ್ಲಿ ಕುಮಾರ್ ಅವರ ಯಾವುದೇ ಪಾತ್ರವಿಲ್ಲ. ವಾಸ್ತವವಾಗಿ, ಕುಮಾರ್ ಅವರು ಸಿಬಿಐ ಮುಂದೆ ಚಾಂಡಿ ಅವರ ಪರವಾಗಿಯೇ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಿಬಿಐ ಅಧಿಕಾರಿಗಳು ನನಗೂ ಮಾಹಿತಿ ನೀಡಿದ್ದಾರೆ. ಇದರಲ್ಲಿ ರಾಜಕೀಯ ಷಡ್ಯಂತ್ರವಿದೆಯೆಂದು ನನಗೆ ಅನಿಸದು' ಎಂದು ಶರಣ್ಯ ಮನೋಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

                 ಸೋಲಾರ್ ಫಲಕಗಳ ಬಹುಕೋಟಿ ಹಗರಣದ ಪ್ರಮುಖ ಆರೋಪಿ ಮಹಿಳೆಯೊಬ್ಬರು ಮಾಡಿದ ಲೈಂಗಿಕ ಶೋಷಣೆ ಆರೋಪದಲ್ಲಿ ಚಾಂಡಿ ಅವರಿಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸಂಸದರಾದ ಅಡೂರ್ ಪ್ರಕಾಶ್, ಹೈಬಿ ಈಡನ್ ಮತ್ತು ಶಾಸಕ ಎ.ಪಿ. ಅನಿಲ್ ಕುಮಾರ್ ಅವರನ್ನು ಆರೋಪ ಮುಕ್ತಗೊಳಿಸಿ ಸಿಬಿಐ ಈ ಹಿಂದೆಯೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries