ನವದೆಹಲಿ: ವಿವಿಧ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ವಿಶೇಷ ವಿಮಾನಗಳು ದೆಹಲಿ ಅಥವಾ ಸಮೀಪದ ಪ್ರದೇಶವನ್ನು ಪ್ರವೇಶಿಸಲು ಯಾವುದೇ ನಿರ್ಬಂಧ ಹೇರಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾರ ಸ್ಪಷ್ಟಪಡಿಸಿದೆ.
ಹೆಲಿಕಾಪ್ಟರ್ ಹಾರಾಟಕ್ಕೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಇಬ್ಬರು ಮುಖ್ಯಮಂತ್ರಿಗಳು ಆರೋಪಿಸಿದ ಬೆನ್ನಲ್ಲೇ ಈ ಸ್ಪಷ್ಟನೆ ನೀಡಿದೆ.
ಇದೇ ವೇಳೆ ಖಾಸಗಿ ವಿಮಾನಗಳ ಹಾರಾಟಕ್ಕೆ ಗೃಹ ಸಚಿವಾಲಯದ ಅನುಮತಿ ಅಗತ್ಯವಿದೆ ಎಂದೂ ತಿಳಿಸಿದೆ.
ಜಿ-20 ಶೃಂಗಸಭೆ ಇರುವ ಕಾರಣ ರಾಜಸ್ಥಾನದ ಸಿಕಾರ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸರ್ಕಾರ ಅನುಮತಿ ನಿರಾಕರಿಸಿತು ಎಂದು ಗೆಹಲೋತ್ ಆರೋಪಿಸಿದ್ದರು.
'ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಇರುವ ಕಾರಣ ಜಿ-20 ಅಂಗವಾಗಿ ಏರ್ಪಡಿಸಿರುವ ಭೋಜನಕೂಟದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ' ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದರು.
ಗೆಹಲೋತ್ ಆರೋಪವನ್ನು ಅಲ್ಲಗಳೆದ ಗೃಹ ಸಚಿವಾಲಯದ ವಕ್ತಾರರು, 'ರಾಜಸ್ಥಾನ ಮುಖ್ಯಮಂತ್ರಿಗಳು ಸಿಕಾರ್ ಸೇರಿದಂತೆ ನಾಲ್ಕು ಕಡೆಗಳಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್‌ಗಾಗಿ ಮನವಿ ಸಲ್ಲಿಸಿದ್ದರು. ಎಲ್ಲಾ ಕಡೆಗಳಲ್ಲಿ ಅನುಮತಿ ನೀಡಲಾಗಿದೆ' ಎಂದು ತಿಳಿಸಿದ್ದಾರೆ.
ಕೇಂದ್ರ ದಾರಿ ತಪ್ಪಿಸುತ್ತಿದೆ: ಗೆಹಲೋತ್
ಕೇಂದ್ರ ಗೃಹ ಸಚಿವಾಲಯ ಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದ ತಪ್ಪು ಮಾಹಿತಿ ನೀಡುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಆರೋಪಿಸಿದ್ದಾರೆ.
ಗೃಹ ಸಚಿವಾಲಯದ ಸ್ಪಷ್ಟನೆ ಕುರಿತು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಸರ್ಕಾರ, ತಪ್ಪು ಮಾಹಿತಿ ನೀಡುವ ಮೂಲಕ ಜನರಲ್ಲಿ ಗೊಂದಲ ಉಂಟುಮಾಡುವ ವಿಫಲ ಯತ್ನ ಮಾಡಿದೆ' ಎಂದು ಹೇಳಿದ್ದಾರೆ.
'ಉದಯಪುರದಿಂದ ಜೈಪುರಕ್ಕೆ ತೆರಳಿ ಸಿಕಾರ್‌ನಲ್ಲಿರುವ ಸಾಂಗ್ಲಿಯಾ ಪೀಠಕ್ಕೆ ತೆರಳಬೇಕಿತ್ತು. ಹೀಗಾಗಿ ಶುಕ್ರವಾರ ಬೆಳಿಗ್ಗೆ 10.48ಕ್ಕೆ ಇ-ಮೇಲ್ ಮೂಲಕ ಅನುಮತಿ ಕೇಳಲಾಗಿತ್ತು. ಮಧ್ಯಾಹ್ನ 2.50ರ ವರೆಗೂ ಅನುಮತಿ ನೀಡಿರಲಿಲ್ಲ. 'ಹೆಲಿಕಾಪ್ಟರ್‌ಗೆ ಗೃಹ ಇಲಾಖೆ ಅನುಮತಿ ನಿರಾಕರಿಸಿದ ಕಾರಣ ಸಾಂಗ್ಲಿಯಾ ಪೀಠಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ' ಎಂದು ಮಧ್ಯಾಹ್ನ 2.52ಕ್ಕೆ 'ಎಕ್ಸ್' ಪೋಸ್ಟ್ ಮೂಲಕ ತಿಳಿಸಲಾಗಿತ್ತು. ಬಳಿಕ 3:58ಕ್ಕೆ ಸರ್ಕಾರ ಅನುಮತಿ ನೀಡಿತು. ನಂತರ ಉದಯಪುರದಿಂದ ಜೈಪುರಕ್ಕೆ ತೆರಳಿದೆ' ಎಂದು ಸ್ಪಷ್ಟನೆ ನೀಡಿದ್ದಾರೆ.