ವಾಷಿಂಗ್ಟನ್: ಟ್ವಿಟರ್ ನಲ್ಲಿ ಶೀಘ್ರ ಶೀಘ್ರವೇ ವಿಡಿಯೊ-ಆಡಿಯೊ ಕರೆ ಸೇವೆ ಆರಂಭಿಸುವುದಾಗಿ ಸಂಸ್ಥೆಯ ಮಾಲೀಕ ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್ ಘೋಷಣೆ ಮಾಡಿದ್ದಾರೆ.
ಖ್ಯಾತ ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಎಲಾನ್ ಮಸ್ಕ್, ಶೀಘ್ರದಲ್ಲೇ ಟ್ವಿಟರ್ ನಲ್ಲಿ ಆಡಿಯೋ-ವಿಡಿಯೋ ಕರೆ ವೈಶಿಷ್ಟ್ಯ ಬರಲಿದೆ. iOS, Android, Mac ಮತ್ತು PC ನಲ್ಲಿಯೂ ಈ ವೈಶಿಷ್ಠ್ಯ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಯಾವುದೇ ರೀತಿಯ ಫೋನ್ ನಂಬರ್ ಸಂಖ್ಯೆಯ ಅಗತ್ಯವಿಲ್ಲ. ಎಕ್ಸ್ ಅಥವಾ ಟ್ವಿಟರ್ ಪರಿಣಾಮಕಾರಿ ಜಾಗತಿಕ ವಿಳಾಸ ಪುಸ್ತಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್ ಅವರು ಮೈಕ್ರೋಬ್ಲಾಗಿಂಗ್ ಜಾಲತಾಣ ‘ಎಕ್ಸ್’ನಲ್ಲಿ (ಟ್ವಿಟರ್) ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಸಾಕಷ್ಟು ಬದಲಾವಣೆಗಳನ್ನು ತಂದಿದ್ದು, ಕೆಲವು ಸಮಯಗಳ ಹಿಂದೆಯಷ್ಟೇ ಎಲಾನ್ ಮಸ್ಕ್ ಅವರು ಟ್ವಿಟರ್ ಹೆಸರನ್ನು ‘ಎಕ್ಸ್’ ಎಂದು ಮರುನಾಮಕರಣ ಮಾಡಿದ್ದರು.
ಈ ಹಿಂದೆ ‘ಎಕ್ಸ್’ ಅಥವಾ ಟ್ವಿಟರ್ ನಲ್ಲಿ ಉದ್ಯೋಗಾವಕಾಶದ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಇತ್ತೀಚೆಗೆ ಮಸ್ಕ್ ಘೋಷಿಸಿದ್ದರು. ಈಗ ವೆರಿಫೈಡ್ ಖಾತೆಗಳಿಗೆ ಎಕ್ಸ್‌ನಲ್ಲಿ ಉದ್ಯೋಗಾವಕಾಶದ (Job Listing) ಕುರಿತು ಪೋಸ್ಟ್ ಮಾಡುವ ಸೇವೆಯನ್ನು ಪ್ರಾರಂಭಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಎಕ್ಸ್‌ನಲ್ಲಿ ವಿವರಣೆ ನೀಡಿತ್ತು. ಜಾಬ್ ಲಿಸ್ಟಿಂಗ್ ಫೀಚರ್ ಸದ್ಯ ಬೀಟಾ ವರ್ಷನ್‌ನಲ್ಲಿದೆ.