ತಿರುವನಂತಪುರಂ: ರಾಜ್ಯಮಟ್ಟದ ಓಣಂ ವಾರಾಚರಣೆ ರಾಜಧಾನಿಯಲ್ಲಿ ನಿನ್ನೆ ವರ್ಣ ರಂಜಿತ ಮೆರವಣಿಗೆಯೊಂದಿಗಗೆ ಸಂಪನ್ನಗೊಂಡಿತು. ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಧ್ವಜಾರೋಹಣ ನೆರವೇರಿಸಿದರು.
ಮೆರವಣಿಗೆಯನ್ನು ವೀಕ್ಷಿಸಲು ವೆಲ್ಲಯಂಬಲಂನಿಂದ ಪೂರ್ವ ಕೋಟಾದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಜನಸ್ತೋಮ ಸಾಲುಗಟ್ಟಿ ನಿಂತಿತ್ತು.
ಬೆಳಗ್ಗಿನಿಂದಲೇ ತುಂತುರು ಮಳೆ ಸುರಿಯುತ್ತಿದ್ದರೂ ಮೆರವಣಿಗೆ ನೋಡಲು ಜನ ನೆರೆದಿದ್ದರು. ಮೋಡ ಕವಿದ ವಾತಾವರಣದಲ್ಲಿ ಮೆರವಣಿಗೆ ಆರಂಭವಾಯಿತು.
ಕೇಂದ್ರ, ರಾಜ್ಯ ಸರ್ಕಾರ, ಅರೆ ಸರ್ಕಾರಿ, ಸಹಕಾರಿ ಮತ್ತು ಸ್ಥಳೀಯಾಡಳಿತ ಸರ್ಕಾರಗಳ ಸುಮಾರು 60 ವಿಭಾಗಗಳು ಮೆರವಣಿಗೆಯಲ್ಲಿದ್ದವು. ತೆಯ್ಯಂ, ಕಥಕ್ಕಳಿ, ವೇಳಕಳಿ, ಪಡಯಣಿ, ಪುಲಿಕಳಿ, ಪೂಕವಾಡಿ, ಅಮ್ಮಂಕುಡಂ ಹೀಗೆ ಹಲವು ವಿಶಿಷ್ಟ ಕಲಾ ಪ್ರಕಾರಗಳಿದ್ದವು. ವಿವಿಧ ರಾಜ್ಯಗಳ ಕಲಾ ಪ್ರಕಾರಗಳೂ ಇದ್ದವು.
ಮೆರವಣಿಗೆಯ ಅಂಗವಾಗಿ ಮಧ್ಯಾಹ್ನ ನಗರದಲ್ಲಿ ಸಂಚಾರ ನಿರ್ಬಂಧ ಹೇರಲಾಗಿತ್ತು. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬರುವವರಿಗೆ ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಒಂದು ವಾರದಿಂದ ರಾಜಧಾನಿಯಲ್ಲಿ ಓಣಂ ಸಪ್ತಾಹದ ಸಂಭ್ರಮ ಜನರ ಪಾಲಿಗೆ ರಂಗೇರಿಸಿದ್ದವು.