ನವದೆಹಲಿ (PTI): ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ದ್ವೈವಾರ್ಷಿಕ ಹಣಕಾಸು ನೀತಿ ಪರಾಮರ್ಶೆ ಮುಂದಿನ ತಿಂಗಳು ನಡೆಯಲಿದೆ. ಸತತ ನಾಲ್ಕನೇ ಬಾರಿಯೂ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಚಿಲ್ಲರೆ ಹಣದುಬ್ಬರವು ಹೆಚ್ಚಾಗಿಯೇ ಇದೆ ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್ ತನ್ನ ಆಕ್ರಮಣಶೀಲ ವರ್ತನೆಯನ್ನು ಮುಂದುವರಿಸಲಿರುವ ಕಾರಣ ಆರ್‌ಬಿಐ ಈ ನಿರ್ಧಾರಕ್ಕೆ ಬರಬಹುದು ಎಂದು ಪರಿಣತರು ಹೇಳಿದ್ದಾರೆ.
ರೆಪೊ ದರವನ್ನು ಆರ್‌ಬಿಐ 2023ರ ಫೆಬ್ರವರಿ 8ರಂದು ಶೇ 6.5ಕ್ಕೆ ಏರಿಸಿತ್ತು. ಅದಾದ ಬಳಿಕ ರೆಪೊ ದರವು ಅದೇ ಮಟ್ಟದಲ್ಲಿ ಇದೆ. ಚಿಲ್ಲರೆ ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿ ಇರುವುದು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಏರುತ್ತಲೇ ಇರುವುದು ಇದಕ್ಕೆ ಕಾರಣ.
ಆರ್‌ಬಿಐ ಗವರ್ನರ್ ಅವರ ನೇತೃತ್ವದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯು ಅಕ್ಟೋಬರ್ 4-6ರವರೆಗೆ ನಿಗದಿಯಾಗಿದೆ. ರೆಪೊ ದರ ನಿಗದಿ ಮಾಡುವ ಈ ಹಿಂದಿನ ಸಭೆಯು ಆಗಸ್ಟ್‌ನಲ್ಲಿ ನಡೆದಿತ್ತು.
'ಹಣದುಬ್ಬರ ಈಗಲೂ ಹೆಚ್ಚಾಗಿಯೇ ಇದೆ ಮತ್ತು ನಗದು ಹರಿವು ಕಡಿಮೆ ಇದೆ. ಹಾಗಾಗಿ, ರೆಪೊ ದರಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆ ಇದೆ. ಮೂರನೇ ತ್ರೈಮಾಸಿಕದಲ್ಲಿಯೂ ಹಣದುಬ್ಬರವು ಶೇ 5ಕ್ಕಿಂತ ಮೇಲೆಯೇ ಇರಲಿದೆ ಎಂಬುದು ಆರ್‌ಬಿಐನ ಅಂದಾಜು. ಬಹುಶಃ, ನಾಲ್ಕನೇ ತ್ರೈಮಾಸಿಕದಲ್ಲಿಯೂ ಇದು ಮುಂದುವರಿಯಲಿದೆ. ಹಾಗಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಅನಿವಾರ್ಯ' ಎಂದು ಬ್ಯಾಂಕ್ ಆಪ್ ಬರೋಡದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ.
ಮುಂಗಾರು ಬೆಳೆ ಕುರಿತ ಅನಿಶ್ಚಿತತೆ ಮುಂದುವರಿದಿದೆ. ಧಾನ್ಯಗಳ ಇಳುವರಿ ನಿರೀಕ್ಷಿತ ಮಟ್ಟ ಮುಟ್ಟುವ ಸಾಧ್ಯತೆ ಇಲ್ಲ. ಹಾಗಾಗಿ, ಬೆಳೆ ಏರಿಕೆಯಾಗಬಹುದು ಎಂದು ಮದನ್ ವಿವರಿಸಿದ್ದಾರೆ.